ಉಡುಪಿ : ಕನ್ನಡದ ಹಿರಿಯ ಸಾಹಿತಿ, ಚಿಂತಕ ಹಾಗೂ ಸಾಂಸ್ಕೃತಿಕ ಹೋರಾಟಗಾರ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ಈ ಬಾರಿಯ ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ. ಶಿವರಾಮ ಕಾರಂತ ಟ್ರಸ್ಟ್ ಪ್ರಕಟಿಸಿದೆ.ಡಾ. ಶಿವರಾಮ ಕಾರಂತ ಅವರ ಜನ್ಮದಿನಾಚರಣೆಯ ಅಂಗವಾಗಿ ಅಕ್ಟೋಬರ್ 24ರಂದು ಸಂಜೆ 4 ಗಂಟೆಗೆ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಕೆ.ಎಂ. ವಸುಂಧರಾ, ಕೆಎಂಎಸ್ ಅವರು ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 25,000 ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಮನೋವೈದ್ಯ, ಲೇಖಕ ಹಾಗೂ ಸಾಮಾಜಿಕ ಹೋರಾಟಗಾರ ಡಾ. ಪಿ.ವಿ. ಭಂಡಾರಿ, ಸಮಾಜಸೇವಕ ಗಣೇಶ್ ಕೊರಗ ಕುಂಭಾಶಿ, ನಿವೃತ್ತ ಪ್ರಾಧ್ಯಾಪಕಿ ಹಾಗೂ ಲೇಖಕಿ ಯು. ಮಹೇಶ್ವರಿ ಕಾಸರಗೋಡು, ಪತ್ರಕರ್ತ ಜಾನ್ ಡಿಸೋಜ ಕುಂದಾಪುರ ಹಾಗೂ ಖ್ಯಾತ ರಂಗತಜ್ಞ ಡಾ. ಶ್ರೀಪಾದ ಭಟ್ ಅವರಿಗೆ ಕಾರಂತ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು. ಡಾ. ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಮಾತ್ರವಲ್ಲದೆ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಸ್ಥಾನ ಪಡೆದವರು. ಸ್ವಾತಂತ್ರ್ಯಪೂರ್ವದ ತಮ್ಮ ಕೃತಿಗಳ ಮೂಲಕ ಶೋಷಣೆ, ಕಂದಾಚಾರ, ಅಸಮಾನತೆ ಮತ್ತು ದಬ್ಬಾಳಿಕೆಗಳ ವಿರುದ್ಧ ಧ್ವನಿ ಎತ್ತಿದ ಅವರು, ವೈಚಾರಿಕ ಹಾಗೂ ವೈಜ್ಞಾನಿಕ ದೃಷ್ಟಿಕೋನವನ್ನು ತಮ್ಮ ಸಾಹಿತ್ಯದ ಪ್ರಮುಖ ಲಕ್ಷಣವನ್ನಾಗಿಸಿಕೊಂಡಿದ್ದರು. ಕರಾವಳಿಯ ಬದುಕು ಮತ್ತು ಸಂಸ್ಕೃತಿಯನ್ನು ತಮ್ಮ ಕೃತಿಗಳಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಿದ್ದರು.

ಈ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ಚಿಂತಕಿ ರೇಖಾ ಬನ್ನಾಡಿ ಹಾಗೂ ಕಾರ್ಕಳದ ಕರಾವಳಿ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್ ಅವರನ್ನೊಳಗೊಂಡ ಸಮಿತಿ ನಡೆಸಿದೆ. ಅಕ್ಟೋಬರ್ 24ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ‘ಕಾರಂತರ ಕಥನಗಳ ವರ್ತಮಾನದ ಮರು ಓದು’ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಹಿರಿಯ ನ್ಯಾಯವಾದಿ ಹಾಗೂ ಸಾಂಸ್ಕೃತಿಕ ಚಿಂತಕ ಎ.ಎಸ್.ಎನ್. ಹೆಬ್ಬಾರ್ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಭಾಗವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಕಾಸರಗೋಡಿನ ಕೇರಳ ಕೇಂದ್ರಿಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ. ಚೇತನ್ ಮುಂಡಾಜೆ, ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಹಾಗೂ ಲೇಖಕಿ ಡಾ. ರೇಖಾ ಬನ್ನಾಡಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲಪ್ಪ ಎಸ್. ಬಂಡಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕ ಡಾ. ಯಶು ಕುಮಾರ್ ಡಿ., ಕೋಟೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಸುಧಾಕರ ದೇವಾಡಿಗ, ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕಿ ಹಾಗೂ ಲೇಖಕಿ ಡಾ. ಪಾರ್ವತಿ ಜಿ. ಐತಾಳ್, ಪ್ರಾಂಶುಪಾಲ ಹಾಗೂ ಚಿಂತಕ ಡಾ. ನಿಕೇತನ, ರಂಗತಜ್ಞ ಡಾ. ಶ್ರೀಪಾದ ಭಟ್ ಮತ್ತು ಡಾ. ಶಿವರಾಮ ಕಾರಂತ ಟ್ರಸ್ಟ್ನ ಸದಸ್ಯ ಹಾಗೂ ಪ್ರಾಧ್ಯಾಪಕ ಡಾ. ಪ್ರಸಾದ್ ರಾವ್ ಪ್ರತಿಕ್ರಿಯೆ ನೀಡಲಿದ್ದಾರೆ.

ಸಂಜೆ 3 ಗಂಟೆಯಿಂದ ಕಾರ್ಕಳದ ಕರಾವಳಿ ರಂಗಾಯಣದ ರೆಪರ್ಟರಿ ತಂಡದಿಂದ ಬಿ.ಆರ್. ವೆಂಕಟರಮಣ ಐತಾಳ್ ಅವರ ನಿರ್ದೇಶನದಲ್ಲಿ ಕಾರಂತ ಕಥನ ಆಧಾರಿತ ನಾಟಕ ಪ್ರದರ್ಶನ ನಡೆಯಲಿದೆ. ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಟ್ರಸ್ಟ್ನ ತ್ರೈಮಾಸಿಕ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ. ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.


