ಉಡುಪಿ: ಪತ್ನಿಯ ಜತೆ ಜಗಳವಾಡಿದ ಬಳಿಕ ವ್ಯಕ್ತಿಯೊಬ್ಬರು ಮನೆ ಬಿಟ್ಟು ಹೋಗಿ ಮರಳಿ ಬಾರದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಅಜ್ಜರಕಾಡು ಆಸ್ಪತ್ರೆ ಎದುರಿನ ಅಪಾರ್ಟ್‌ಮೆಂಟ್‌ನಲ್ಲಿ ಶಮ್ಮಿ ಹಾಗೂ ಆಕೆಯ ಪತಿ ಮೊಹಮ್ಮದ್ ಶಫಿ ವಾಸವಾಗಿದ್ದು, ಶಫಿ ಖಾಸಗಿ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು.

ಕಳೆದ ಸುಮಾರು ಒಂಬತ್ತು ತಿಂಗಳಿಂದ ಶಫಿಗೆ ಮತ್ತೊಬ್ಬ ಮಹಿಳೆಯ ಪರಿಚಯವಿದ್ದು, ಈ ವಿಚಾರವಾಗಿ ದಂಪತಿಗಳ ನಡುವೆ ಹಲವಾರು ಬಾರಿ ಕಲಹ ಉಂಟಾಗಿತ್ತು ಎನ್ನಲಾಗಿದೆ. ಏಪ್ರಿಲ್ 11ರಂದು ಬೆಳಗ್ಗೆ 8.30ಕ್ಕೆ ಕೆಲಸಕ್ಕೆ ತೆರಳಿದ ಶಫಿ, ಸಂಜೆ 5 ಗಂಟೆಗೆ ಪತ್ನಿ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಬಳಿಕ ಸಂಬಂಧಿತ ಕಂಪೆನಿಗೆ ವಿಚಾರಿಸಿದಾಗ ಮಧ್ಯಾಹ್ನ ಹೊರಗೆ ಹೋದ ಅವರು ಮರುಕಳಿಸಿಲ್ಲ ಎಂದು ತಿಳಿದುಬಂದಿದೆ.

ಈ ಹಿನ್ನೆಲೆ ಮೊಹಮ್ಮದ್ ಶಫಿ ಯಾರಿಗೂ ತಿಳಿಸದೆ ಮನೆ ಬಿಟ್ಟು ತೆರಳಿ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.



