ಉಡುಪಿ: ತಾವು ಕಲಿತ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಸೇವೆ ಸಲ್ಲಿಸುವುದು ಅತ್ಯಂತ ಪುಣ್ಯದ ಕೆಲಸ. ಈ ಮೂಲಕ ವಿದ್ಯೆ ನೀಡಿದ ಶಾಲೆಯ ಋಣ ತೀರಿಸಿದಂತಾಗುತ್ತದೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದರು. ಅವರು ಮಂಗಳವಾರ ಸಂಜೆ ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 125ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗುವ ಉದ್ದೇಶದಿಂದ ಸ್ಥಾಪಿಸಲಾದ ವಿಶೇಷ ಸಮಿತಿಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

125 ವರ್ಷಗಳ ಹಿಂದೆ ನಮ್ಮ ಹಿರಿಯರು ಶಿಕ್ಷಣಕ್ಕೆ ನೀಡಿದ ಮಹತ್ವದ ಫಲವಾಗಿ ಇಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಶೈಕ್ಷಣಿಕವಾಗಿ ಉನ್ನತ ಸ್ಥಾನದಲ್ಲಿವೆ. ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಪರಿಸ್ಥಿತಿ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿಯೂ ನಿಟ್ಟೂರು ಶಾಲೆಯಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಶಾಲೆಯ ಶತಮಾನೋತ್ತರ ರಜತ ಮಹೋತ್ಸವದ ಶುಭ ಸಂದರ್ಭದಲ್ಲಿ ಶಾಲಾ ಕಟ್ಟಡದ ನವೀಕರಣ, ಹೊಸ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಮಿತಿ ಮುಂದಾಗಿದೆ. ಈ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ದಾನಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳ ಸಹಕಾರ ಅಗತ್ಯವಾಗಿದೆ. ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಸಮಾಜದ ನಾಗರಿಕರು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯ ಡೇನಿಸ್ ಕರ್ನೇಲಿಯೊ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಎಸ್. ಬಾರಿತ್ತಾಯ, ಹಳೆ ವಿದ್ಯಾರ್ಥಿ ಸುವರ್ಣ ನಿಧಿ ಟ್ರಸ್ಟ್ ಅಧ್ಯಕ್ಷ ಯು.ಜೆ. ಮಹಮ್ಮದ್ ಹನೀಫ್, ವಿಶೇಷ ಸಮಿತಿಯ ಕೋಶಾಧಿಕಾರಿ ಚಂದ್ರಕಾಂತ್ ಕೆ.ಎನ್., ಸಮಿತಿ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ ಬಿ. ಆಚಾರ್ಯ, ಕೃಷ್ಣ ಶ್ರೀಧರನ್, ಕೆ. ಹರೀಶ್ ಆಚಾರ್ಯ, ಅಬೂಬಕ್ಕರ್ ಸಿದ್ದಿಕ್, ಮಹೇಶ್ ಟಿ., ಶೇಖರ್ ಪಿ., ಗಣೇಶ್ ಕುಮಾರ್, ವೈ. ಹಯವದನ ಭಟ್, ಕೆ. ಶ್ರೀಪತಿ ಭಟ್, ಗುರುರಾಜ್ ಭಟ್, ಅನಿಲ್ ಗುಂಡಿಬೈಲು, ಸಮಿತಾ, ಶೋಭಿತಾ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಕವಿತಾ ಶೆಟ್ಟಿ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಗಿರಿಜಾ, ಸಪ್ನಾ, ರೇಖಾ, ಸೋಫಿಯಾ, ಮಂಜುಳ, ಕಸ್ತೂರಿ, ರುಕ್ಮಿಣಿ ಹಾಗೂ ಅಂಗನವಾಡಿ ಶಿಕ್ಷಕಿ ಸವಿತಾ ಭಾಗವಹಿಸಿದ್ದರು. ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ್ ಕರ್ನೇಲಿಯೊ ಸ್ವಾಗತಿಸಿದರು. ವಿಶೇಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ. ಸದಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


