ಉಡುಪಿ : ಕೋಟ್ಪಾ-2003 ಕಾಯಿದೆಯ ಪರಿಣಾಮಕಾರಿ ಅನುಷ್ಠಾನದ ಅಂಗವಾಗಿ ಕಾಪು ತಾಲೂಕಿನ ಪಡುಬಿದ್ರಿ ಪೇಟೆ ಹಾಗೂ ಬಸ್‌ಸ್ಟ್ಯಾಂಡ್ ಪ್ರದೇಶಗಳಲ್ಲಿ ತಂಬಾಕು ನಿಯಂತ್ರಣ ತನಿಖಾ ದಳವು ದಾಳಿ ನಡೆಸಿ 44 ಪ್ರಕರಣಗಳನ್ನು ದಾಖಲಿಸಿ ರೂ 17 ಸಾವಿರ ದಂಡ ವಸೂಲಿ ಮಾಡಿದೆ.

ಉಡುಪಿ ತಾಲೂಕು ಆರೋಗ್ಯಾಧಿಕಾರಿಯವರ ನೇತೃತ್ವದಲ್ಲಿ ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ತಂಬಾಕು ಮಾರಾಟದ ಅಂಗಡಿಗಳು, ಹೋಟೆಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಪರಿಶೀಲನೆ ನಡೆಸಲಾಯಿತು. ಈ ವೇಳೆ ಕೋಟ್ಪಾ ಕಾಯಿದೆಯ ಸೆಕ್ಷನ್ 4, 6(ಎ) ಹಾಗೂ 6(ಬಿ) ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 44 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಯಿತು. ಅಲ್ಲದೆ, ತಂಬಾಕು ನಿಯಂತ್ರಣ ಕಾಯಿದೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆಕ್ಷನ್ 4, 6(ಎ) ಮತ್ತು 6(ಬಿ) ಕುರಿತ ನಾಮಫಲಕಗಳನ್ನು ವಿತರಿಸಲಾಯಿತು.

ಕಾರ್ಯಾಚರಣೆಯಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಬಸವರಾಜ್ ಜಾಡರ್ ಹಾಗೂ ಜಗದೀಶ್ ರಾವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯ್ಕ್, ಪಡುಬಿದ್ರಿ ಪೊಲೀಸ್ ಠಾಣೆಯ ಶ್ರೀಧರ್ ಆರ್., ಕಾರ್ಮಿಕ ನಿರೀಕ್ಷಕ ಎನ್.ಪಿ.ಎಲ್. ಸಂಜಯ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಂಯೋಜಕಿ ಮಂಜುಳಾ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ್ ಡಿ. ಭಂಡಾರಿ ಭಾಗವಹಿಸಿದ್ದರು.



