ಕಾರ್ಕಳ : ಜಾಗ ಹಾಗೂ ಮನೆಯ ತಕರಾರು ಹಿನ್ನೆಲೆ ಅಣ್ಣನನ್ನೇ ತಮ್ಮ ಹತ್ಯೆಗೈದ ಘಟನೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಮಿತ್ತಬೆಟ್ಟು ಹಿರಿಯಂಗಡಿಯಲ್ಲಿ ನಡೆದಿದೆ. ಮೃತರನ್ನು ರಿಚರ್ಡ್ ಡಿಸೋಜ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಮ್ಮ ಹೆರಾಲ್ಡ್ ಡಿಸೋಜನನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ರಿಚರ್ಡ್ ಡಿಸೋಜ ಮತ್ತು ಹೆರಾಲ್ಡ್ ಡಿಸೋಜರ ನಡುವೆ ಮನೆಯ ಜಾಗಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ವೈಮನಸ್ಸು ಮುಂದುವರಿದಿತ್ತು. ಮೇ 2ರಂದು ಸಂಜೆ ಸುಮಾರು 6 ಗಂಟೆ ವೇಳೆಗೆ ಜಾಗದ ವಿಚಾರವಾಗಿ ಇಬ್ಬರ ನಡುವೆ ಮತ್ತೆ ಗಲಾಟೆ ನಡೆದಿದ್ದು, ವಾಗ್ವಾದ ತಾರಕಕ್ಕೇರಿದ ವೇಳೆ ಆರೋಪಿ ಹೆರಾಲ್ಡ್ ಡಿಸೋಜ ಮರದ ರೀಪು ಅಥವಾ ಇನ್ನಾವುದೋ ಆಯುಧದಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ ರಿಚರ್ಡ್ ಡಿಸೋಜ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಮೃತರ ಪತ್ನಿ ಜೆಸಿಂತ ಡಿಸೋಜ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್‌ಪಿ ವಿಜಯಪ್ರಸಾದ್ ಕೆ.ಎಸ್.ಪಿ.ಎಸ್ ಮಾರ್ಗದರ್ಶನದಲ್ಲಿ ಸಿಪಿಐ ಅಜ್ಮತ್ ಅಲಿ ನೇತೃತ್ವದ ತಂಡ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಪ್ರಸನ್ನ ಎಂ.ಎಸ್, ಮುರುಳೀಧರ್ ನಾಯ್ಕ್, ಶಿವಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶೇಖರ್ ನಾಯ್ಕ್, ಮೂರ್ತಿ, ರಂಜಿತ್, ಶ್ರೀನಿವಾಸ್, ಮಹಾಂತೇಶ್, ಗೋಪಾಲಕೃಷ್ಣ, ಗಜಾನಾಯ್ಕ್, ಶಶಿ ಮತ್ತು ಸಂತೋಷ್ ಪಾಲ್ಗೊಂಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



