ಉಡುಪಿ : ಜಾಗತಿಕ ಮಟ್ಟದಲ್ಲಿ ಸಂವಹನ ನಡೆಸಲು ಇಂಗ್ಲಿಷ್ ಭಾಷೆ ಪ್ರಮುಖ ಸೇತುವೆಯಾಗಿದೆ. ವಿದ್ಯಾರ್ಥಿಗಳು ಭಾಷೆಯ ಮಹತ್ವ ಅರಿತು, ನಿರಂತರ ಅಭ್ಯಾಸದ ಮೂಲಕ ತಮ್ಮ ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಉಡುಪಿಯ ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕ ಯೋಗೇಶ್ ಡಿ.ಎಚ್. ಹೇಳಿದರು.

ಕೋಟ-ಪಡುಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ಇಂಗ್ಲಿಷ್ ವಿಭಾಗದ ವತಿಯಿಂದ ಸೆ. 26ರಂದು ಆಯೋಜಿಸಿದ್ದ ‘ಕೋಟ-ಪಡುಕೆರೆಯಿಂದ ಜಗತ್ತಿಗೆ ಸಂವಹನ ಸೇತುವೆಯಾಗಿ ಇಂಗ್ಲಿಷ್ ಭಾಷೆ’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಸಂವಹನ ಭಾಷೆಯಾಗಿ ಇಂಗ್ಲಿಷ್ನ ಮಹತ್ವವನ್ನು ವಿವರಿಸಿದ ಅವರು, ಭಾರತೀಯ ಇಂಗ್ಲಿಷ್ ಭಾಷೆಯ ಬೆಳವಣಿಗೆ ಹಾಗೂ ಭಾರತೀಯ ಭಾಷೆಗಳ ಹಲವು ಪದಗಳು ಇಂಗ್ಲಿಷ್ ನಿಘಂಟುಗಳಲ್ಲಿ ಸೇರ್ಪಡೆಯಾಗಿರುವುದನ್ನು ಉದಾಹರಣೆಗಳ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ನಿಯಮಿತ ಅಭ್ಯಾಸದ ಜತೆಗೆ ಆಡಿಯೋ ಮತ್ತು ದೃಶ್ಯ ಮಾಧ್ಯಮದ ಸಂಪನ್ಮೂಲಗಳನ್ನು ಬಳಸಿಕೊಂಡು ಭಾಷಾ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ ಮಾತನಾಡಿ, ವಿದ್ಯಾರ್ಥಿಗಳು ದಿನನಿತ್ಯದ ಸಂವಹನದಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸುವುದರಿಂದ ಅದನ್ನು ಕಲಿಯಲು ಹೆಚ್ಚಿನ ಅವಕಾಶ ದೊರೆಯುತ್ತದೆ ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ್ ಆಚಾರ್, ಐಕ್ಯೂಎಸಿ ಸಂಚಾಲಕ ಸಂತೋಷ್ ನಾಯ್ಕ್ ಹೆಚ್. ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಸುಷ್ಮಾ ಕಾರ್ಯಕ್ರಮ ಸಂಘಟಿಸಿದರು. ತೃತೀಯ ಬಿ.ಸಿ.ಎ. ವಿದ್ಯಾರ್ಥಿನಿ ಕೀರ್ತನಾ ನಿರೂಪಿಸಿದರು. ಮಿಶ್ರಿಯಾ ವಂದಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.


