Friday, July 17, 2026

spot_img

ಗ್ರಾಮ ಪಂಚಾಯತ್‌ಗಳ ಮೂಲಕ ಪೆಟ್ರೋಲ್ ಬಂಕ್, ಇವಿ ಚಾರ್ಜಿಂಗ್ ಕೇಂದ್ರ ಹಾಗೂ ಭಾರತ್ ಕೆಫೆ ಆರಂಭ..

ಉಡುಪಿ: ತೆಲಂಗಾಣದ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಗ್ರಾಮ ಪಂಚಾಯತ್‌ಗಳ ಮೂಲಕ ಪೆಟ್ರೋಲ್ ಬಂಕ್, ಇವಿ ಚಾರ್ಜಿಂಗ್ ಕೇಂದ್ರ, ಸಿಎನ್‌ಜಿ ಸೌಲಭ್ಯ ಹಾಗೂ ಭಾರತ್ ಕೆಫೆಗಳನ್ನು ಆರಂಭಿಸುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಭಾರತ್ ಪೆಟ್ರೋಲಿಯಂ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗೂ ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಈ ಮಾಹಿತಿ ನೀಡಿದರು. ಆಯ್ಕೆಗೊಂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಸಮೀಪದಲ್ಲಿರುವ ಪಂಚಾಯತ್ ನಿವೇಶನಗಳಲ್ಲಿ ಭಾರತ್ ಪೆಟ್ರೋಲಿಯಂ ಸಹಯೋಗದಲ್ಲಿ ಪೆಟ್ರೋಲ್ ಬಂಕ್, ಇವಿ ಚಾರ್ಜಿಂಗ್ ಕೇಂದ್ರ, ಸಿಎನ್‌ಜಿ ಘಟಕ ಹಾಗೂ ಭಾರತ್ ಕೆಫೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ ವರ್ಷದ ಆರಂಭದಲ್ಲೇ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಗುರಿ ಹೊಂದಲಾಗಿದೆ ಎಂದು ಸಂಸದರು ತಿಳಿಸಿದರು. ಮೊದಲ ಹಂತದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿಯ ಮುಡ್ರಾಡಿ, ಬೆಳ್ಳೆ, ಅಲಾಡಿ, ಕಾರ್ಕಳದ ಮುದಾರು, ಬೆಳ್ಳಣ್ಣು, ಸಾಣೂರು, ಕುಕ್ಕಂದೂರು, ಬೈಲೂರು ಹಾಗೂ ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮ ಪಂಚಾಯತ್‌ಗಳಲ್ಲಿ ಸೂಕ್ತ ನಿವೇಶನಗಳನ್ನು ಗುರುತಿಸಲಾಗಿದೆ. ಇವುಗಳನ್ನು ಭಾರತ್ ಪೆಟ್ರೋಲಿಯಂ ಸಂಸ್ಥೆಯ ಮಾನದಂಡಗಳಿಗೆ ಅನುಗುಣವಾಗಿ ಪರಿಶೀಲಿಸಿ ಶಿಫಾರಸು ಮಾಡಲಾಗಿದೆ.

ಉಳಿದ ತಾಲೂಕುಗಳಲ್ಲಿಯೂ ಸ್ಥಳಗಳ ಸಮೀಕ್ಷೆ ನಡೆಯುತ್ತಿದ್ದು, ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಗ್ರಾಮ ಪಂಚಾಯತ್ ಮೂಲಕ ಪೆಟ್ರೋಲ್ ಬಂಕ್ ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು. ಗ್ರಾಮ ಪಂಚಾಯತ್‌ಗಳ ಮೂಲಕ ಕಾರ್ಯನಿರ್ವಹಿಸುವ ಪೆಟ್ರೋಲ್ ಬಂಕ್‌ಗಳಿಂದ ಬಾಡಿಗೆ ಹಾಗೂ ವ್ಯವಹಾರ ಆಧಾರಿತ ಕಮಿಷನ್ ಪಂಚಾಯತ್‌ಗಳಿಗೆ ದೊರೆಯಲಿದ್ದು, ಇದರಿಂದ ಗ್ರಾಮ ಪಂಚಾಯತ್‌ಗಳ ಆರ್ಥಿಕ ಸ್ವಾವಲಂಬನೆ ಮತ್ತು ಆಡಳಿತ ಸಾಮರ್ಥ್ಯ ಮತ್ತಷ್ಟು ಬಲಗೊಳ್ಳಲಿದೆ ಎಂದು ಸಂಸದರು ಹೇಳಿದರು. ಈ ಪೆಟ್ರೋಲ್ ಬಂಕ್‌ಗಳಲ್ಲಿ ಇವಿ ಚಾರ್ಜಿಂಗ್ ವ್ಯವಸ್ಥೆಯ ಜೊತೆಗೆ ಸಿಎನ್‌ಜಿ ಪೂರೈಕೆ ಹಾಗೂ ಡೀಸೆಲ್ ಸೇರಿದಂತೆ ಇತರೆ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಭಾರತ್ ಪೆಟ್ರೋಲಿಯಂನ ಟೆರಿಟರಿ ಮ್ಯಾನೇಜರ್ ವಿಪಿನ್ ದಾಸ್ ವಂಶ್ವಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಸಹಾಯಕ ಕಾರ್ಯದರ್ಶಿ ಜೇಮ್ಸ್ ಡಿಸಿಲ್ವಾ, ವಿವಿಧ ತಾಲೂಕುಗಳ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ಅಂತ್ಯದಲ್ಲಿ ಆಯ್ಕೆಗೊಂಡ ಗ್ರಾಮ ಪಂಚಾಯತ್‌ಗಳ ನಿವೇಶನಗಳ ಪಟ್ಟಿಯನ್ನು ಭಾರತ್ ಪೆಟ್ರೋಲಿಯಂ ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಸ್ತಾಂತರಿಸಿ, ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles