ಉಡುಪಿ : ಗೋವಾದಿಂದ ನಾಪತ್ತೆಯಾಗಿ, ಕಾಡಬೆಟ್ಟುವಿನ ಬೆಳಕು ಆಶ್ರಮದಲ್ಲಿ ಪುನರ್ವಸತಿ ಪಡೆದಿದ್ದ ವೃದ್ಧರ ವಾರಸುದಾರರು ಪತ್ತೆಯಾಗಿದ್ದು, ಬಳಿಕ ವೃದ್ಧರನ್ನು ಕುಟುಂಬದ ಸದಸ್ಯರ ಮಡಿಲಿಗೆ ಸೇರಿಸಲಾಯಿತು. ಕಳೆದ ಮೇ 31ರಂದು ಇಂದ್ರಾಳಿಯ ರೈಲ್ವೇ ನಿಲ್ದಾಣದ ಪ್ರಯಾಣಿಕರ ವಾಹನ ನಿಲುಗಡೆ ಪ್ರದೇಶದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರು ಕಂಡುಬಂದಿದ್ದರು. ಅವರ ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ತಂದಿದ್ದರು.

ಮಾಹಿತಿ ಪಡೆದ ಒಳಕಾಡುವರು ರಾಜೇಶ್ ಕಾಪು ಅವರ ಸಹಕಾರದೊಂದಿಗೆ ವೃದ್ಧರಿಗೆ ಕಾಡಬೆಟ್ಟುವಿನ ಬೆಳಕು ಆಶ್ರಮದಲ್ಲಿ ತಾತ್ಕಾಲಿಕ ಪುನರ್ವಸತಿ ವ್ಯವಸ್ಥೆ ಮಾಡಿದ್ದರು. ಆಶ್ರಮದ ವತಿಯಿಂದ ವೃದ್ಧರಿಗೆ ಅಗತ್ಯ ಊಟೋಪಚಾರ ಹಾಗೂ ಆರೈಕೆ ಒದಗಿಸಿ ಮಾನವೀಯತೆ ಮೆರೆದಿತ್ತು. ವೃದ್ಧರು ತಮ್ಮ ಹೆಸರನ್ನು ಮಹಾಬಲ ಶೇರಿಗಾರ ಎಂದು ತಿಳಿಸಿದ್ದರೂ, ವಿಳಾಸದ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಸಾಧ್ಯವಾಗಿರಲಿಲ್ಲ. ಮರೆವು ಕಾಯಿಲೆಯಿಂದ ಬಳಲುತ್ತಿದ್ದ ಅವರು ದಿಕ್ಕುತಪ್ಪಿ ಗೋವಾದಿಂದ ಉಡುಪಿಗೆ ಬಂದಿರುವುದು ಬಳಿಕ ತಿಳಿದುಬಂದಿದೆ.

ಇದೇ ವೇಳೆ, ವೃದ್ಧರು ನಾಪತ್ತೆಯಾಗಿರುವ ಕುರಿತು ಗೋವಾದಲ್ಲಿ ಅವರ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ವಿವಿಧ ಹಂತದ ಪರಿಶೀಲನೆ ಹಾಗೂ ಸಂಪರ್ಕ ಕಾರ್ಯಾಚರಣೆಯ ಬಳಿಕ ವಾರಸುದಾರರು ಪತ್ತೆಯಾಗಿದ್ದು, ವೃದ್ಧರನ್ನು ಸುರಕ್ಷಿತವಾಗಿ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಈ ಕಾರ್ಯದಲ್ಲಿ ಸಮಾಜಸೇವಕರು ಹಾಗೂ ಬೆಳಕು ಆಶ್ರಮದ ಸಿಬ್ಬಂದಿ ತೋರಿದ ಮಾನವೀಯ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.



