ಉಡುಪಿ : ತಮಿಳುನಾಡು ಮುಖ್ಯಮಂತ್ರಿ ಸಿ. ವಿಜಯ್ ಅವರು ಇಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ದೇವಸ್ಥಾನದ ವತಿಯಿಂದ ಅವರಿಗೆ ಪೂರ್ಣಕುಂಭ ಕಲಶದೊಂದಿಗೆ ಭವ್ಯ ಸ್ವಾಗತ ನೀಡಲಾಯಿತು. ದೇವಸ್ಥಾನದ ಮುಂಭಾಗದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಹೆಗ್ಡೆ, ಸದಸ್ಯರು ಹಾಗೂ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರು ಮುಖ್ಯಮಂತ್ರಿಯನ್ನು ಬರಮಾಡಿಕೊಂಡರು. ಸರ್ಕಾರದ ಪರವಾಗಿ ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ದೇವಾಲಯದ ಧ್ವಜಸ್ತಂಭಕ್ಕೆ ನಮಸ್ಕರಿಸಿದ ಬಳಿಕ ವಿಜಯ್ ದೇವಾಲಯ ಪ್ರವೇಶಿಸಿ ದೇವಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಸಂಕಲ್ಪ ನೆರವೇರಿಸಲಾಯಿತು. ಆದರೆ ಯಾವುದೇ ವಿಶೇಷ ಮನೋಭಿಲಾಷೆಯ ಸಂಕಲ್ಪ ಮಾಡಿಲ್ಲ ಎಂದು ಅರ್ಚಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ವಿಜಯ್ ಅವರು ದೇವಿಗೆ ಬೆಳ್ಳಿಯ ಖಡ್ಗವನ್ನು ಕಾಣಿಕೆಯಾಗಿ ಸಮರ್ಪಿಸಿದರು. ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ನಟ ಎಂ.ಜಿ. ರಾಮಚಂದ್ರನ್ (ಎಂಜಿಆರ್) ದೇವಿಗೆ ಚಿನ್ನದ ಖಡ್ಗವನ್ನು ಅರ್ಪಿಸಿದ್ದನ್ನು ಸ್ಮರಿಸಲಾಯಿತು. ದೇವಾಲಯದ ಭೇಟಿ ವೇಳೆ ಎಂಜಿಆರ್ ಸಮರ್ಪಿಸಿದ್ದ ಚಿನ್ನದ ಖಡ್ಗವನ್ನೂ ವಿಜಯ್ ವೀಕ್ಷಿಸಿದರು.

ಸುಮಾರು 30 ನಿಮಿಷಗಳ ಕಾಲ ದೇವಸ್ಥಾನದಲ್ಲಿ ಕಾಲ ಕಳೆದ ವಿಜಯ್, ಬಳಿಕ ವೀರಭದ್ರ ಸ್ವಾಮಿ ದರ್ಶನ ಪಡೆದು ಪ್ರದಕ್ಷಿಣೆ ನೆರವೇರಿಸಿದರು. ದೇವಾಲಯದಿಂದ ಹೊರಬಂದ ನಂತರ ಅಭಿಮಾನಿಗಳತ್ತ ಕೈಬೀಸಿ ನಮಸ್ಕರಿಸಿ ಶುಭಾಶಯ ಸ್ವೀಕರಿಸಿದರು. ವಿಶೇಷವೆಂದರೆ, ದೇವಸ್ಥಾನದಿಂದ ಹಿಂದಿರುಗುವ ವೇಳೆ ವಿಜಯ್ ಸ್ವತಃ ಕಾರು ಚಲಾಯಿಸಿಕೊಂಡು ತೆರಳಿದರು. ದೇವಸ್ಥಾನದ ಹೊರಭಾಗದಲ್ಲಿ ನೆರೆದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಕಂಡು ಸಂಭ್ರಮ ವ್ಯಕ್ತಪಡಿಸಿದರು.

ವಿಜಯ್ ಅವರ ಭೇಟಿಯ ಕುರಿತು ಮಾತನಾಡಿದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ, ಮುಖ್ಯಮಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸ್ತಂಭ ಗಣಪತಿ ಬಳಿ ಪ್ರಾರ್ಥನೆ ಮಾಡಿಸಿ ದೇವಿಯ ಸನ್ನಿಧಿಯಲ್ಲಿ ದರ್ಶನ ಹಾಗೂ ಸಂಕಲ್ಪ ನೆರವೇರಿಸಲಾಯಿತು. ಅವರು ಯಾವುದೇ ವಿಶೇಷ ಸಂಕಲ್ಪ ಮಾಡಿಲ್ಲ. ದೇವಿಗೆ ಬೆಳ್ಳಿಯ ಖಡ್ಗವನ್ನು ಕಾಣಿಕೆಯಾಗಿ ನೀಡಿದ್ದು, ಅದನ್ನು ನಿತ್ಯ ಅಲಂಕಾರದಲ್ಲಿ ಬಳಸುವಂತೆ ಮನವಿ ಮಾಡಿದ್ದಾರೆ. ಎಂಜಿಆರ್ ಸಮರ್ಪಿಸಿದ್ದ ಚಿನ್ನದ ಖಡ್ಗವನ್ನೂ ಅವರಿಗೆ ತೋರಿಸಲಾಯಿತು. ಪ್ರಸಾದ ಸ್ವೀಕರಿಸಿ ಸಂತೋಷದಿಂದ ತೆರಳಿದ್ದಾರೆ ಎಂದು ತಿಳಿಸಿದರು. ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಜಯ್ ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿರುವುದು ಭಕ್ತರು ಹಾಗೂ ಅಭಿಮಾನಿಗಳಲ್ಲಿ ವಿಶೇಷ ಕುತೂಹಲ ಮೂಡಿಸಿತ್ತು.



