ಉಡುಪಿ : ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಮಣೂರುಮನೆ ಸಮೀಪದ ಸರ್ಕಾರಿ ಹಾಡಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕ ಜುಗಾರಿ ಮೇಲೆ ಕುಂದಾಪುರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿ, ನಗದು, ಕೋಳಿಗಳು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ನಿರಂಜನ್ ಗೌಡ ಬಿ.ಎಸ್. ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಕೊರ್ಗಿ ಗ್ರಾಮದ ಮಣೂರುಮನೆ ಪ್ರದೇಶದ ಸರ್ಕಾರಿ ಹಾಡಿಯಲ್ಲಿ ಕೆಲವರು ಕೋಳಿ ಅಂಕ ಜುಗಾರಿ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಜುಗಾರಿ ಆಟದಲ್ಲಿ ತೊಡಗಿದ್ದ ಮಂಜುನಾಥ, ಸುಕ್ಷಯ್, ಶರಣ, ರಮೇಶ್ ಹಾಗೂ ರಜತ್ ಎಂಬ ಐವರನ್ನು ವಶಕ್ಕೆ ಪಡೆದಿದ್ದಾರೆ.

ಧಾಳಿಯ ವೇಳೆ ಆರೋಪಿಗಳಿಂದ 1,600 ರೂ ನಗದು, ಎರಡು ಜೀವಂತ ಕೋಳಿ ಹುಂಜಗಳು, ಒಂದು ಕೋಳಿ ಬಾಳು, ಕೋಳಿಗಳ ಕಾಲಿಗೆ ಬಾಳು ಕಟ್ಟಲು ಬಳಸಿದ್ದ ಹಗ್ಗ, ಎರಡು ಬೀಣಿ ಕೈಚೀಲಗಳು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೋಂಡಾ ಶೈನ್, ಸ್ಕೂಟಿ ಹಾಗೂ ಯಮಹಾ ಆರ್‌ಎಕ್ಸ್ ಸೇರಿ ಒಟ್ಟು ಅಂದಾಜು ಮೌಲ್ಯ55 ಸಾವಿರ ರೂ ಮೌಲ್ಯದ ವಾಹನ ವಶಕ್ಕೆ ಪಡೆಯಲಾಗಿದೆ. ಆರೋಪಿತರು ತಮ್ಮ ಸ್ವಂತ ಲಾಭಕ್ಕಾಗಿ ಕೋಳಿಗಳಿಗೆ ಆಹಾರ ಮತ್ತು ನೀರು ನೀಡದೆ, ಕಾಲಿಗೆ ಕತ್ತಿ ಕಟ್ಟುವ ಮೂಲಕ ಹಿಂಸೆ ನೀಡಿ, ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಕೋಳಿ ಅಂಕ ಜುಗಾರಿ ನಡೆಸುತ್ತಿದ್ದರೆಂದು ಆರೋಪಿಸಿ, ಆರೋಪಿಗಳ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


