ಉಡುಪಿ : ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು 36 ವರ್ಷದ ರೋಗಿಯೊಬ್ಬರ ಮೇಲೆ ಅತ್ಯಂತ ಸಂಕೀರ್ಣವಾದ ಶ್ವಾಸನಾಳದ (ಎದೆಯೊಳಗಿನ) ರೋಬೋಟಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಶಸ್ತ್ರಚಿಕಿತ್ಸೆಯ ಬಳಿಕ ನಾಲ್ಕನೇ ದಿನವೇ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಯ ಶ್ವಾಸನಾಳದ ಕೆಳಭಾಗದಲ್ಲಿ ಕ್ಯಾನ್ಸರ್ ಗೆಡ್ಡೆ ಇರುವುದು ಎಂಡೋಸ್ಕೋಪಿ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಈ ಹಿಂದೆ ಹೊರಗಿನ ಆಸ್ಪತ್ರೆಯಲ್ಲಿ ಭಾಗಶಃ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ಉಳಿದಿದ್ದ ಗೆಡ್ಡೆಯನ್ನು ಸಂಪೂರ್ಣವಾಗಿ ತೆರವುಗೊಳಿಸುವ ಅಗತ್ಯವಿತ್ತು.

ಕಸ್ತೂರ್ಬಾ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ನವೀನ ಕುಮಾರ್ ಎ.ಎನ್. ನೇತೃತ್ವದಲ್ಲಿ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿತು. ರೋಬೋಟಿಕ್ ತಂತ್ರಜ್ಞಾನದ ನೆರವಿನಿಂದ ಶ್ವಾಸನಾಳದ ಹಾನಿಗೊಳಗಾದ ಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕಿ, ಆರೋಗ್ಯಕರ ಭಾಗಗಳನ್ನು ಜೋಡಿಸುವ ಮೂಲಕ ಶ್ವಾಸನಾಳದ ಪುನರ್ನಿರ್ಮಾಣ ಯಶಸ್ವಿಯಾಗಿ ಮಾಡಲಾಯಿತು. ಶಸ್ತ್ರಚಿಕಿತ್ಸೆಯ ಅವಧಿಯಲ್ಲೇ ರೋಗಿಯ ಉಸಿರಾಟ ಮತ್ತು ಆಮ್ಲಜನಕದ ಮಟ್ಟವನ್ನು ಸಮತೋಲನದಲ್ಲಿರಿಸಿಕೊಂಡು ಕಾರ್ಯಾಚರಣೆ ನಡೆಸುವುದು ವೈದ್ಯರಿಗೆ ಸವಾಲಿನ ಸಂಗತಿಯಾಗಿತ್ತು. ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ರೋಬೋಟಿಕ್ ಶಸ್ತ್ರಚಿಕಿತ್ಸೆಯಿಂದ ಕಡಿಮೆ ನೋವು, ಕಡಿಮೆ ರಕ್ತಸ್ರಾವ ಹಾಗೂ ವೇಗವಾದ ಚೇತರಿಕೆ ಸಾಧ್ಯವಾಗಿದ್ದು, ರೋಗಿ ನಾಲ್ಕೇ ದಿನಗಳಲ್ಲಿ ಮನೆಗೆ ಮರಳಿದ್ದಾರೆ.

ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ನವಾಜ್ ಉಸ್ಮಾನ್, ಡಾ. ಅಖಿಲ್ ಪಲೋದ್, ಡಾ. ಅನಂತ್ ಬಾಲಕೃಷ್ಣನ್ ಹಾಗೂ ಡಾ. ಪ್ರೀತಿ ಇದ್ದರು. ಅರಿವಳಿಕೆ ವಿಭಾಗದ ಡಾ. ಅನಿತಾ ಎನ್. ಮತ್ತು ಡಾ. ಶ್ರೇಯಾ ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಡಾ. ನವೀನ ಕುಮಾರ್ ಎ.ಎನ್., ರೋಬೋಟಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಇದು ಅತ್ಯಂತ ಸವಾಲಿನ ಕಾರ್ಯವಿಧಾನಗಳಲ್ಲಿ ಒಂದಾಗಿದ್ದು, ಶಸ್ತ್ರಚಿಕಿತ್ಸಾ ಮತ್ತು ಅರಿವಳಿಕೆ ತಂಡಗಳ ಸಮನ್ವಯದಿಂದ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು. ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ವೈದ್ಯರ ತಂಡವನ್ನು ಅಭಿನಂದಿಸಿ, ಭವಿಷ್ಯದಲ್ಲಿಯೂ ಅತ್ಯಾಧುನಿಕ ರೋಬೋಟಿಕ್ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.


