Monday, August 31, 2026

spot_img

ಕಸ್ತೂರಿ ರಂಗನ್ ವರದಿ: ಸಾಧಕ-ಬಾಧಕ ಪರಿಶೀಲನೆಗೆ ಕ್ರಮ

ಉಡುಪಿ : ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ಶಿಫಾರಸು ಆಧರಿಸಿ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಕರಡು ಅಧಿಸೂಚನೆಯ ಸಾಧಕ-ಬಾಧಕಗಳನ್ನು ಸಮಗ್ರವಾಗಿ ಪರಿಶೀಲಿಸಿ, ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಪರಿಸರ ಸೂಕ್ಷ್ಮ ಕುರಿತು ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಸ್ತೂರಿ ರಂಗನ್ ವರದಿ ಜಾರಿಯಿಂದ ಕಾಡಂಚಿನ ಜನರ ಜೀವನ ಹಾಗೂ ಜೀವನೋಪಾಯಕ್ಕೆ ತೊಂದರೆಯಾಗುವ ಸಾಧ್ಯತೆ, ಮೂಲಸೌಕರ್ಯ ಅಭಿವೃದ್ಧಿಗೆ ಅಡ್ಡಿಯಾಗುವ ಆತಂಕಗಳಿವೆ. ಮತ್ತೊಂದೆಡೆ ಪರಿಸರ ಸಂರಕ್ಷಣೆಯೂ ಆದ್ಯತೆಯಾಗಬೇಕು. ಹೀಗಾಗಿ ವರದಿಯಲ್ಲಿರುವ ಅಂಶಗಳನ್ನು ಪೂರ್ವಾಪರಗಳೊಂದಿಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕಸ್ತೂರಿ ರಂಗನ್ ಕರಡು ಅಧಿಸೂಚನೆಯಲ್ಲಿ ಕ್ವಾರಿ, ಕೈಗಾರಿಕೆ, ಬಹುಮಹಡಿ ಕಟ್ಟಡಗಳು, ಟೌನ್‌ಶಿಪ್, ಥರ್ಮಲ್ ಪವರ್ ಪ್ಲಾಂಟ್ ಹಾಗೂ ಏರಿಯಾ ಡೆವಲಪ್‌ಮೆಂಟ್ ಯೋಜನೆಗಳಿಗೆ ನಿರ್ಬಂಧ ವಿಧಿಸುವ ಅಂಶಗಳಿವೆ. ಕೇಂದ್ರ ಸರ್ಕಾರ ವರದಿ ಆಧರಿಸಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೆ ಈಗಾಗಲೇ ಏಳು ಬಾರಿ ಅಧಿಸೂಚನೆ ಹೊರಡಿಸಿದೆ. ಇದರಿಂದ ಮಲೆಕುಡಿಯ, ಕೊರಗ ಸೇರಿದಂತೆ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳಲ್ಲಿ ಆತಂಕ ಉಂಟಾಗಿದೆ ಎಂದು ಅವರು ತಿಳಿಸಿದರು.

ಕರಡು ಅಧಿಸೂಚನೆಯಂತೆ ಕಾರ್ಕಳ ತಾಲೂಕಿನ 13 ಹಾಗೂ ಕುಂದಾಪುರ ತಾಲೂಕಿನ 22 ಸೇರಿದಂತೆ ಒಟ್ಟು 35 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡಲಿವೆ. ಪರಿಸರ ಸೂಕ್ಷ್ಮ ಪ್ರದೇಶದ ಮಧ್ಯಭಾಗದಲ್ಲಿಯೂ ವಸತಿ ಪ್ರದೇಶಗಳಿರುವುದರಿಂದ ಈ ಬಗ್ಗೆ ಕೂಲಂಕಷ ಪರಿಶೀಲನೆ ಅಗತ್ಯವಿದೆ ಎಂದರು.

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಕೃಷಿ, ಪರಿಸರ ಹಾಗೂ ಸಾರ್ವಜನಿಕರ ದೈನಂದಿನ ಬದುಕಿನ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಸಮಗ್ರವಾಗಿ ವಿಶ್ಲೇಷಿಸಬೇಕು ಎಂದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಜನಪರ ಕಾಯಿದೆಗಳು ಜನರ ಒಳಿತಿಗೆ ಅನುಗುಣವಾಗಿರಬೇಕು. ಪರಿಸರ ಸಂರಕ್ಷಿಸುವುದರೊಂದಿಗೆ ಮುಂದಿನ ಪೀಳಿಗೆಯ ಬದುಕಿಗೂ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಕಸ್ತೂರಿ ರಂಗನ್ ಕರಡು ಅಧಿಸೂಚನೆಯನ್ನು ವಿರೋಧಿಸಲಾಗುವುದು. ಜಿಲ್ಲೆಯ 35 ಗ್ರಾಮಗಳ ಜನರ ಬದುಕಿಗೆ ತೊಂದರೆಯಾಗದಂತೆ ಭೌತಿಕ ಸರ್ವೆ ನಡೆಸಿ ವರದಿ ಸಲ್ಲಿಸಬೇಕು. ಪರಿಸರ ಸೂಕ್ಷ್ಮ ವಲಯವನ್ನು ವಸತಿ ಪ್ರದೇಶದಿಂದ ಹೊರಗಿಡಬೇಕು ಎಂದು ಆಗ್ರಹಿಸಿದರು.

ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಜನರ ಆಕ್ಷೇಪಣೆಗಳನ್ನು ಆಲಿಸಿ ಕಾನೂನುಗಳನ್ನು ಜಾರಿಗೆ ತರಬೇಕು. ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುವ ಗ್ರಾಮಗಳು ಹಾಗೂ ಸರ್ವೆ ನಂಬರ್‌ಗಳ ಬಗ್ಗೆ ನಿಖರ ಮಾಹಿತಿ ಜನರಿಗೆ ನೀಡಬೇಕು. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಗಡಿ ಗುರುತಿಸುವುದರೊಂದಿಗೆ ಪ್ರತಿ ಗ್ರಾಮ ಮಟ್ಟದಲ್ಲಿ ಕರಡು ವರದಿ ಕುರಿತು ಚರ್ಚಿಸಿ ವರದಿ ಪಡೆಯುವುದು ಸೂಕ್ತ ಎಂದರು.

ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, ವರದಿ ಜಾರಿಗೆ ಮುನ್ನ ಜನರಿಗೆ ಆಗುವ ತೊಂದರೆ, ಅನುಕೂಲ ಹಾಗೂ ಸೌಲಭ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಕಾಡಂಚಿನ ಜನರ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ನ್ಯಾಯಾಂಗ ವ್ಯವಸ್ಥೆಯ ಗಮನಕ್ಕೆ ತರುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು. ಸಭೆಯಲ್ಲಿ ಡಿಎಫ್‌ಒ ರುಥ್ರೇನ್ ಪಿ., ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles