ಉಡುಪಿ: ಉಡುಪಿ ಎಪಿಎಂಸಿ ಅಧಿಕಾರಿಗಳು ದೌರ್ಜನ್ಯ ಹಾಗೂ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಉಡುಪಿ ಎಪಿಎಂಸಿ ರಕ್ಷಣಾ ಸಮಿತಿ ವತಿಯಿಂದ ಬುಧವಾರ ಎಪಿಎಂಸಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಸಮಿತಿ ಅಧ್ಯಕ್ಷ ವಿಜಯ ಕೊಡವೂರು ಮಾತನಾಡಿ, ಎಪಿಎಂಸಿ ಲೆಕ್ಕಿಗ ಹಾಗೂ ಕಾರ್ಯದರ್ಶಿ ಸೇರಿ ಲಕ್ಷಾಂತರ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು. ನಿತ್ಯಮಾರುಕಟ್ಟೆ ನಿವೇಶನವನ್ನು ಲೀಸ್–ಸೇಲ್ ಹೆಸರಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ. ಅಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಇಂಟರ್ಲಾಕ್, ಶೆಡ್ಗಳು ಹಾಗೂ ಮರಗಳನ್ನು ನಾಶಪಡಿಸಲಾಗಿದೆ ಎಂದು ದೂರಿದರು.

ನಿತ್ಯಮಾರುಕಟ್ಟೆಯಲ್ಲಿ ನಿಯಮ ಉಲ್ಲಂಘಿಸಿ ದಾಸ್ತಾನು ಮಳಿಗೆಗಳ ನಿರ್ಮಾಣ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸುಮಾರು 175 ಹರಾಜು ಕಟ್ಟೆಗಳಲ್ಲಿ ಕೆಲವು ಕಡೆ ಪರವಾನಗಿ ಇಲ್ಲದೆ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ಅಕ್ರಮ ಚಟುವಟಿಕೆ ಹಾಗೂ ಜುಗಾರಿ ನಡೆಯುತ್ತಿದ್ದು, ಭದ್ರತಾ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಎಪಿಎಂಸಿ ಜಾಗದ ಮೂಲ ದಾಖಲೆಗಳ ಬಗ್ಗೆಯೂ ಸ್ಪಷ್ಟತೆ ಇಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು. ಮಾರುಕಟ್ಟೆಯಲ್ಲಿನ ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಎಪಿಎಂಸಿ ರಕ್ಷಿಸುವ ಜತೆಗೆ ಸಾಮಾನ್ಯ ವರ್ತಕರು ಮತ್ತು ಗ್ರಾಹಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಸುಭಾಷಿತ್ ಕುಮಾರ್, ಬಿಜೆಪಿ ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ನಟೇಶ್, ರಮಾಕಾಂತ್ ಕಾಮತ್, ಪ್ರಭುಗೌಡ, ಫಯಾಜ್, ಜಗಳೂರಯ್ಯ ರಮಾನಾಥ ಪೈ, ರಾಧಾಕೃಷ್ಣ ಮಲ್ಪೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.


