ಕುಂದಾಪುರ : ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಸಮಾಜದಲ್ಲಿ ವಿಜ್ಞಾನಿ, ಡಾಕ್ಟರ್ ಆಗಿ ದೇಶಕ್ಕೆ ಕೊಡುಗೆ ನೀಡಿ ಎಂದು ವಿ ವಿ ವಿ ಮಂಡಳಿ.ರಿ.ಹೆಮ್ಮಾಡಿ ಇದರ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಹೇಳಿದರು. ಅವರು ಹೆಮ್ಮಾಡಿ ಜನತಾ ಪಿಯು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಜನತಾ ದಿಬ್ಬಣ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಚಿತ್ರ ಸಾಹಿತಿ ಪ್ರಮೋದ್ ಮರವಂತೆ ಮಾತನಾಡಿ ಅವಕಾಶ ಸಿಕ್ಕಾಗ ಬಳಸಿಕೊಳ್ಳಿ ಪ್ರತಿಭೆಗೆ ಇರುವ ಸೌಂದರ್ಯ ಎಲ್ಲೂ ಇರುವುದಿಲ್ಲ.ನಕಾರಾತ್ಮಕ ಯೋಚನೆ ಬಿಟ್ಟು ಮುನ್ನೆಡೆಯಿರಿ. ಪ್ರತಿಭೆ ಎಂಬ ಗಿಡ ಮರವಾಗಿ ಬೆಳೆದು ಮುಂದೆ ನಿಮಗೆ ನೆರಳು ಕೊಡುತ್ತದೆ ಹೆಚ್ಚು ಸಾಹಿತ್ಯ ಪುಸ್ತಕಗಳನ್ನು ಓದಿ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಿ ಎಂದರು. ಜಿ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಬೆಳ್ತಂಗಡಿ ಮಾತನಾಡಿ ಇವತ್ತಿನ ಪ್ರತಿಭಾ ದಿನದದಲ್ಲಿ ನಿಮಗೆ ಸಿಕ್ಕ ಅವಕಾಶ ಮುಂದೊಂದು ದಿನ ನಿಮ್ಮ ನ್ನು ಬಹಳ ಎತ್ತರಕ್ಕೆ ಕೊಂಡೊಯುತ್ತದೆ ಎಂದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರ ಮಾತನಾಡಿ ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೆ ಅವಕಾಶವನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ವಿದ್ಯಾರ್ಥಿಗಳು ತಮ್ಮ ಸುಪ್ತ ಪ್ರತಿಭೆಯನ್ನು ಇಂದಿನ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡುವುದರ ಮೂಲಕ ಭವಿಷ್ಯದಲ್ಲಿ ಸಾಧಕರಾಗಿ ರೂಪುಗೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಉದಯ ಕುಮಾರ್ ಹಟ್ಟಿಯಂಗಡಿ,ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ.ಜನತಾ ಪ್ರೌಢ ಶಾಲೆ ಹೆಮ್ಮಾಡಿಯ ಪ್ರಭಾರ ಮುಖ್ಯ ಶಿಕ್ಷಕರಾದ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ರಮೇಶ್ ಪೂಜಾರಿ ಸ್ವಾಗತಿಸಿ, ಉಪನ್ಯಾಸಕರಾದ ಅಭಿಜಿತ್ ವಂದಿಸಿ ಉದಯ ನಾಯ್ಕ ನಿರೂಪಿಸಿದರು. ನಂತರ ಆರು ತಂಡಗಳ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಿತು. ವೈಯಕ್ತಿಕ ಮತ್ತು ಗುಂಪು ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು