ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ಕನ್ನುಕೆರೆ ಆಭರಣ ಮಳಿಗೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಅಯ್ಯಪ್ಪ ಮಾಲಾಧಾರಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕೋಟೇಶ್ವರ ಸಮೀಪದ ಕುಂಬ್ರಿ ನಿವಾಸಿ ಹಾಡಿಮನೆ ಸುರೇಂದ್ರ ಮೊಗವೀರ (35) ಎಂದು ಗುರುತಿಸಲಾಗಿದೆ.

ನವಂಬರ್ 3ರಂದು ಮುಂಜಾನೆ ಸುಮಾರು 15 ಮಂದಿ ಅಯ್ಯಪ್ಪ ಮಾಲಾಧಾರಿಗಳು ಕೋಟೇಶ್ವರದಿಂದ ಕಾಲ್ನಡಿಗೆಯ ಮೂಲಕ ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇಗುಲದತ್ತ ಸಾಗುತ್ತಿದ್ದಾಗ ಈ ಅಪಘಾತ ನಡೆದಿದೆ. ಕಾಲ್ನಡಿಗೆ ಮೂಲಕ ಸಾಗುತ್ತಿರುವಾಗ ಅತಿ ವೇಗದಲ್ಲಿ ಬಂದ ಬೈಕ್ ಒಂದು ಹಿಂದಿನಿಂದ ಸುರೇಂದ್ರ ಮೊಗವೀರ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ತೀವ್ರ ಗಾಯಗಳಾಗಿವೆ.

ಸ್ಥಳೀಯರು ತಕ್ಷಣವೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಅಸುನೀಗಿದ್ದಾರೆ.ಅಪಘಾತದಲ್ಲಿ ಮತ್ತೊಬ್ಬ ಅಯ್ಯಪ್ಪ ವ್ರತಧಾರಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಸುರೇಂದ್ರ ಅವರು ಅವಿವಾಹಿತರಾಗಿದ್ದು, ಕೋಟೇಶ್ವರದಲ್ಲಿ ಬಡಗಿ ವೃತ್ತಿ ನಿರ್ವಹಿಸುತ್ತಿದ್ದರು. ಅವರು ತಂದೆ, ತಾಯಿ, ಸಹೋದರ ಮತ್ತು ಸಹೋದರಿಯರನ್ನು ಅಗಲಿದ್ದಾರೆ.ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



