ಉಡುಪಿ : ಹಿರಿಯ ರಂಗಕರ್ಮಿ ಹಾಗೂ ಹಾಸ್ಯ ನಟ ರಾಜು ತಾಳಿಕೋಟೆ (43) ಅವರು ಹೃದಯಾಘಾತದಿಂದಾಗಿ ಇಂದು ಮುಂಜಾನೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ಅವರು, ನಾಟಕ ಹಾಗೂ ಚಿತ್ರರಂಗದಲ್ಲಿ ವಿಶಿಷ್ಟ ಗುರುತು ಮೂಡಿಸಿದ್ದರು. ಮೂರು ದಿನಗಳ ಕಾಲ ನಡೆಯಲಿದ್ದ ಶೈನ್ ಶೆಟ್ಟಿ ಅಭಿನಯದ ಹೊಸ ಚಿತ್ರದ ಶೂಟಿಂಗ್ ಸಲುವಾಗಿ ರಾಜು ತಾಳಿಕೋಟೆ ಉಡುಪಿಗೆ ಬಂದಿದ್ದರು. ಚಿತ್ರೀಕರಣದ ನಂತರ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ರವಿವಾರ ಮಧ್ಯರಾತ್ರಿ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕಿ ಉಳಿಯಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಮುಂಬರುವ ಶೂಟಿಂಗ್ ಕಾರ್ಯದಲ್ಲಿ ಭಾಗವಹಿಸಬೇಕಿದ್ದ ಅವರ ಅಕಾಲಿಕ ನಿಧನದಿಂದ ಚಿತ್ರತಂಡ ಹಾಗೂ ರಂಗಭೂಮಿ ವಲಯದಲ್ಲಿ ಆಘಾತ ಮೂಡಿದೆ. ಹಿಂದೆ ಕೂಡ ಹೃದಯಾಘಾತದಿಂದ ಚಿಕಿತ್ಸೆ ಪಡೆದಿದ್ದ ರಾಜು ತಾಳಿಕೋಟೆ ಅವರಿಗೆ ಸ್ಟಂಟ್ ಅಳವಡಿಸಲಾಗಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಹೆಚ್ಚಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹೃದಯಾಘಾತ ಉಂಟಾಗಿರಬಹುದು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾದ ಅವರು, ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ‘ಖಾಸ್ಗತೇಶ್ವರ ನಾಟಕ ಮಂಡಳಿ’ಯ ಸ್ಥಾಪಕರಾಗಿದ್ದು, ಹಾಸ್ಯ ಹಾಗೂ ಕುಡುಕನ ಪಾತ್ರಗಳ ಮೂಲಕ ಜನಮನ ಗೆದ್ದಿದ್ದರು. ರಾಜು ತಾಳಿಕೋಟೆಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು, ಸಹನಟರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆ ವಿಜಯಪುರದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.