ಉಡುಪಿ: ಹೊಸ ವರ್ಷಾಚರಣೆ, ಕ್ರಿಸ್ಮಸ್ ಹಾಗೂ ಇತರ ಹಬ್ಬಗಳ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಡಿಸೆಂಬರ್ 24ರಿಂದ 31ರವರೆಗೆ ಜಿಲ್ಲೆಮಟ್ಟದಲ್ಲಿ ವಿಶೇಷ ಸಂಚಾರ ಕಾರ್ಯಾಚರಣೆ ನಡೆಸಲಾಗಿದೆ.

ಈ ಕಾರ್ಯಾಚರಣೆಯಡಿ ಜಿಲ್ಲೆಯಲ್ಲಿ ಒಟ್ಟು 29 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ, ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು 1,199 ಪ್ರಕರಣಗಳನ್ನು ದಾಖಲಿಸಿ 9,62,400 ರೂಪಾಯಿ ದಂಡ ವಿಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 103 ಪ್ರಕರಣಗಳು, ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದ 803 ಪ್ರಕರಣಗಳು, ಸೀಟ್ ಬೆಲ್ಟ್ ಬಳಸದ 243 ಪ್ರಕರಣಗಳು, ಟ್ರಿಪಲ್ ರೈಡ್ ಮಾಡಿದ 35 ಪ್ರಕರಣಗಳು ಹಾಗೂ ಚಾಲನೆಯ ವೇಳೆ ಮೊಬೈಲ್ ಫೋನ್ ಬಳಕೆಯ 15 ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರ ಜೀವ–ಆಸ್ತಿ ರಕ್ಷಣೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿಯೂ ಸಂಚಾರ ನಿಯಮ ಪಾಲನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.



