ಉಡುಪಿ : ಜಿಲ್ಲೆಯಲ್ಲಿ ಹೊರರಾಜ್ಯದ ವ್ಯಾಪಾರಿಗಳಿಂದ ಸ್ಥಳೀಯ ಟೈಲರ್ಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕ ಪ್ರತಿಭಟನಾತ್ಮಕ ಅಭಿಯಾನ ನಡೆಸಿತು. ಜಿಲ್ಲೆಯಲ್ಲಿ ಹೊರರಾಜ್ಯಗಳಿಂದ ಬಂದ ವ್ಯಾಪಾರಿಗಳು ಬಟ್ಟೆ ವ್ಯಾಪಾರದ ಜೊತೆಗೆ ಸ್ಥಳದಲ್ಲೇ ಹೊಲಿಗೆ ಕೆಲಸ ಕೈಗೊಳ್ಳುತ್ತಿರುವುದರಿಂದ ದಶಕಗಳಿಂದ ಈ ವೃತ್ತಿಯನ್ನೇ ನಂಬಿಕೊಂಡಿರುವ ಸ್ಥಳೀಯ ಟೈಲರ್ಗಳ ಜೀವನೋಪಾಯಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ನೊಂದ ಟೈಲರ್ಗಳು ಕರವೇ ಜಿಲ್ಲಾ ಘಟಕಕ್ಕೆ ಮನವಿ ಸಲ್ಲಿಸಿ ನ್ಯಾಯ ಒದಗಿಸುವಂತೆ ವಿನಂತಿಸಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಅಧ್ಯಕ್ಷ ಅ.ರಾ. ಪ್ರಭಾಕರ್ ಪೂಜಾರಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದರು. ಈ ವೇಳೆ ಮಾತನಾಡಿದ ಅವರು ಸ್ಥಳೀಯರ ಬದುಕಿಗೆ ಹೊಡೆತ ನೀಡುವ ಅನಧಿಕೃತ ಹೊಲಿಗೆ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಕೈಗೊಳ್ಳಲಾಗುವುದುಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಶಾಬುದ್ದೀನ್, ಪ್ರಧಾನ ಕಾರ್ಯದರ್ಶಿ ರಾಜು ಬಸ್ರೂರು, ಪುರುಷೋತ್ತಮ್ ಪೂಜಾರಿ ಕೊಡಪಾಡಿ, ಮಜೀದ್, ಅಜಾರುದ್ದೀನ್, ದಾಮೋದರ ಮೊಗವೀರ, ಅಶ್ವಿನಿ ನಾಯ್ಕ್, ಅನುಷಾ ಆಚಾರ್, ಸುನಂದಾ, ಶಶಿಕಲಾ, ಸಂತೋಷ್ ಶೆಟ್ಟಿ ಪಡುಮುಂಡು, ಕೆ.ಸಿ. ಸಂತೋಷ್, ಕೃಷ್ಣ ಮೊಗವೀರ, ಶ್ರೀಧರ್ ಕೋಟೆ, ಶಿವಾನಂದ ಶೇರಿಗಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ನೂರಾರು ಸಂಖ್ಯೆಯಲ್ಲಿ ಟೈಲರ್ಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕರವೇ ಹಮ್ಮಿಕೊಂಡ ಈ ಹೋರಾಟಕ್ಕೆ ಸ್ಥಳೀಯ ಟೈಲರ್ಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕನ್ನಡ ನೆಲದಲ್ಲಿ ಸ್ಥಳೀಯರ ವೃತ್ತಿ ಹಿತರಕ್ಷಣೆ ನಮ್ಮ ಆದ್ಯತೆ. ಹೊರರಾಜ್ಯದವರು ವ್ಯಾಪಾರ ಮಾಡಲಿ, ಆದರೆ ಸ್ಥಳೀಯರ ಜೀವನೋಪಾಯಕ್ಕೆ ಧಕ್ಕೆಯಾಗಬಾರದು” ಎಂದು ಸಂಘಟನೆ ತಿಳಿಸಿದೆ.



