Monday, August 24, 2026

spot_img

ಸೊಳ್ಳೆ ನಿಯಂತ್ರಣದಿಂದ ಸೊಳ್ಳೆಜನ್ಯ ರೋಗ ತಡೆ ಸಾಧ್ಯ: ಆರೋಗ್ಯ ಇಲಾಖೆ

ಉಡುಪಿ : ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ, ಆನೆಕಾಲು, ಚಿಕೂನ್‌ಗುನ್ಯಾ ಹಾಗೂ ಮೆದುಳುಜ್ವರ ಸೇರಿದಂತೆ ವಿವಿಧ ಕಾಯಿಲೆಗಳ ನಿಯಂತ್ರಣಕ್ಕೆ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟುವುದು ಅತ್ಯಂತ ಮುಖ್ಯ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಸೊಳ್ಳೆ ದಿನಾಚರಣೆ ಕಾರ್ಯಕ್ರಮ ನಡೆಯಿತು.

ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ, 1897ರ ಆಗಸ್ಟ್ 20ರಂದು ಬ್ರಿಟಿಷ್ ವೈದ್ಯ ವಿಜ್ಞಾನಿ ಸರ್ ರೊನಾಲ್ಡ್ ರಾಸ್ ಅವರು ಸೊಳ್ಳೆಗಳ ಮೂಲಕ ಮನುಷ್ಯರಿಗೆ ಮಲೇರಿಯಾ ಹರಡುತ್ತದೆ ಎಂಬುದನ್ನು ಜಗತ್ತಿಗೆ ತಿಳಿಸಿದರು. ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ ಎಂದರು.

ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಹೆಚ್. ನಾಯ್ಕ್ ಮಾತನಾಡಿ, ಅನಾಫಿಲಿಸ್, ಕ್ಯುಲೆಕ್ಸ್ ಹಾಗೂ ಈಡಿಸ್ ಈಜಿಪ್ಟಿ ಜಾತಿಯ ಸೊಳ್ಳೆಗಳು ಮಲೇರಿಯಾ, ಡೆಂಗ್ಯೂ, ಆನೆಕಾಲು, ಚಿಕೂನ್‌ಗುನ್ಯಾ ಮತ್ತು ಮೆದುಳುಜ್ವರ ಸೇರಿದಂತೆ ಹಲವು ಕಾಯಿಲೆಗಳನ್ನು ಹರಡುತ್ತವೆ. ಸೊಳ್ಳೆ ನಿಯಂತ್ರಣವೇ ಈ ರೋಗಗಳ ತಡೆಗೆ ಪ್ರಮುಖ ಮಾರ್ಗವಾಗಿದ್ದು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವಪ್ಪ ಪಟೇಗಾರ್ ಮಾತನಾಡಿ, ಜ್ವರ ಕಾಣಿಸಿಕೊಂಡ ಕೂಡಲೇ ಆರೋಗ್ಯ ಕೇಂದ್ರಕ್ಕೆ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದರ ಜೊತೆಗೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.

ನೀರಿನ ಶೇಖರಣಾ ತೊಟ್ಟಿಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ, ಭದ್ರವಾಗಿ ಮುಚ್ಚಿಡಬೇಕು. ಸಂಜೆ ವೇಳೆ ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ವೈಯಕ್ತಿಕ ರಕ್ಷಣಾ ವಿಧಾನ, ರಾಸಾಯನಿಕ ವಿಧಾನ ಹಾಗೂ ಜೈವಿಕ ವಿಧಾನಗಳ ಮೂಲಕ ಸೊಳ್ಳೆ ನಿಯಂತ್ರಣ ಕೈಗೊಳ್ಳುವ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಮೇಲ್ವಿಚಾರಣಾಧಿಕಾರಿ ಪಿ.ಎಂ. ಇಟಗಿ, ಪ್ರಾಧ್ಯಾಪಕರಾದ ಅನುಪಮಾ ಐ., ಡಾ. ರಂಜನಾ ಪಾಟೀಲ್, ಪ್ರಾಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles