ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರುನಲ್ಲಿ ಸೆಪ್ಟೆಂಬರ್ 27ರಂದು ನಡೆದ ಎಕೆಎಂಎಸ್ ಬಸ್ ಮಾಲಕ ಸೈಫ್ ಯಾನೆ ಸೈಯಿಪುದ್ದಿನ್ ಆತ್ರಾಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಅಕ್ರಮ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.

ಅಕ್ರಮ್ ಹಾಗೂ ಸೈಫ್ ಇಬ್ಬರೂ 2016ರ ಜುಲೈ 14ರಂದು ಆತ್ರಾಡಿ ಸಮೀಪದ ಶೇಡಿಗುಡ್ಡೆಯಲ್ಲಿ ನಡೆದ ಶೇಖ್ ಮಹಮ್ಮದ್ ತಸ್ಲೀಮ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ನಂತರ ಇಬ್ಬರೂ ವ್ಯವಹಾರದಲ್ಲಿ ಜೊತೆಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೈಫ್ ಕೊಲೆಗೆ ಒಂದು ವಾರ ಮೊದಲು ಅಕ್ರಮ್ ಸಂಚು ರೂಪಿಸಿ ದುಬೈಗೆ ಪರಾರಿಯಾಗಿದ್ದು, ವ್ಯವಹಾರ ಸಂಬಂಧಿತ ಸಾಲಗಳನ್ನು ಸೈಫ್ ಹಾಗೂ ಆತನ ಪತ್ನಿ ಹೆಸರಿಗೆ ಬರೆದು, ಲಾಭದ ವ್ಯವಹಾರವನ್ನು ತನ್ನ ಪಾಲಿಗೆ ಮಾಡಿಕೊಂಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಪ್ರಕರಣದ ತನಿಖೆ ಮುಂದುವರಿಸಿರುವ ಉಡುಪಿ ಪೊಲೀಸರು, ಅಕ್ರಮ್ ಬಂಧನಕ್ಕಾಗಿ ಇಂಟರ್ಪೋಲ್ ಸಹಾಯದೊಂದಿಗೆ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.



