Saturday, July 5, 2025

spot_img

ಸುಮನಸಾ ಕೊಡವೂರು ರಂಗಹಬ್ಬದ ನಾಲ್ಕನೇ ದಿನದ ಕಾರ್ಯಕ್ರಮ

ಉಡುಪಿ : ಮೊಬೈಲ್‌, ಇನ್ನಿತರ ಕಾರಣಗಳಿಂದ ನಾಟಕ, ಇನ್ನಿತರ ರಂಗ ಚಟುವಟಿಕೆಗಳಿಂದ ಜನರು ದೂರವಾಗುತ್ತಿದ್ದಾರೆ. ಸಾಮಾಜಿಕ ಮೌಲ್ಯಗಳನ್ನು, ಪ್ರಜ್ಞೆಯನ್ನು ಬಿತ್ತುವ ಮೂಲಕ ಮತ್ತೆ ಪ್ರೇಕ್ಷಕರನ್ನು ಹತ್ತಿರಕ್ಕೆ ತರುವ ಕೆಲಸವನ್ನು ಸುಮನಸಾದಂತ ರಂಗತಂಡಗಳು ಮಾಡುತ್ತಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದರು.

ಅವರು ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬ ನಾಲ್ಕನೇ ದಿನದ ಅಧ್ಯಕ್ಷತೆ ವಹಿಸಿ ಅವರು ಬುಧವಾರ ಮಾತನಾಡಿದರು. ಮಕ್ಕಳಿಗೆ ತರಬೇತಿ ನೀಡುವ ಮೂಲಕ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ಕಾರ್ಯವು ಶ್ಲಾಘನೀಯ. ಹಿರಿಯರೇ ಪ್ರೇಕ್ಷಕರಾಗಿ ಬರುತ್ತಿದ್ದಾರೆ. ತಮ್ಮ ಜೊತೆಗೆ ಮಕ್ಕಳನ್ನೂ ಕರೆದುಕೊಂಡು ಬಂದರೆ ಅವರೂ ಮುಂದೆ ರಂಗಕರ್ಮಿಗಳಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಆಶಿಸಿದರು.

ಕಲ್ಕೂರ ಬಿಲ್ಡರ್ಸ್‌ ಆಡಳಿತ ನಿರ್ದೇಶಕ ರಂಜನ್‌ ಕಲ್ಕೂರ ಮಾತನಾಡಿ, ‘ಸುಮನಸಾ ತಂಡದ ಶಿಸ್ತು, ಸಮಯಪಾಲನೆಯು ಎಲ್ಲರಿಗೂ ಆದರ್ಶವಾಗಿರುವಂಥದ್ದು. ನಾನು ಈ ಸಮಯ ಪಾಲನೆಯ ಶಿಸ್ತನ್ನು ನನ್ನ ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆ’ ಎಂದು ಶ್ಲಾಘಿಸಿದರು. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ರವಿರಾಜ ಹೆಗ್ಡೆ ಮಾತನಾಡಿ, ‘ಸ್ವತಃ ಸುಮನಸಾ ಸಂಘಟನೆಯ ಕಲಾವಿದರು ನಾಟಕಗಳನ್ನು ಮಾಡುವುದಲ್ಲದೇ ಹೊರಗಿನ ತಂಡಗಳಿಗೂ ಅವಕಾಶ ನೀಡುತ್ತಾ ಬಂದಿದ್ದಾರೆ’ ಎಂದು ವಿವರಿಸಿದರು. ವಕೀಲ ಅನಿಲ್‌ ಕುಮಾರ್‌ ಮಾತನಾಡಿ, ‘ಕಲೆ ಮತ್ತು ಕಲಾವಿದರ ಸಂಗಮದಿಂದ ರಂಗಹಬ್ಬ ನಡೆಯುತ್ತಿದೆ. ಸುಮನಸಾ ಸಂಘಟನೆಯು ತನ್ನ ಯೋಜನಾಬದ್ಧ ಕಾರ್ಯಕ್ರಮಗಳ ಮೂಲಕ ಅನೇಕ ಸಂದೇಶ ನೀಡುತ್ತಾ ಬಂದಿದೆ. ಅದನ್ನು ಅಳವಡಿಸುಕೊಳ್ಳುವುದು ಸಮಾಜದ ಜವಾಬ್ದಾರಿ’ ಎಂದು ಹೇಳಿದರು.

ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿರಾಜ್‌ ಎಚ್‌.ಪಿ. ಮಾತನಾಡಿ, ‘ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಐದು ವರ್ಷಗಳಿಂದ ಕೊಡಮಾಡುತ್ತಿರುವ ಮಲಬಾರ್‌ ವಿಶ್ವರಂಗ ಪುರಸ್ಕಾರಕ್ಕೆ ಈ ಬಾರಿ ಸುಮನಸಾ ಕೊಡವೂರು ಸಂಘಟನೆಯ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಘೋಷಿಸಿದರು. ಉಪ್ಪೂರು ಭಾಗ್ಯಲಕ್ಷ್ಮೀ ಅವರನ್ನು ರಂಗಸನ್ಮಾನ ನೀಡಿ ಗೌರವಿಸಲಾಯಿತು. ಉದ್ಯಮಿ ಹರೀಶ್‌ ಪೂಜಾರಿ, ವರಾಹಿ ದಂತ ಚಿಕಿತ್ಸಾಲಯದ ಡಾ. ವಿಜೇತ್‌ ಶೆಟ್ಟಿ, ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಯೋಗೀಶ್‌ ಕೊಳಲಗಿರಿ ಸ್ವಾಗತಿಸಿದರು. ಕಿರಣ್‌ ವಂದಿಸಿದರು. ಪ್ರಜ್ಞಾ ಮತ್ತು ಶ್ರೀವತ್ಸಾರಾವ್‌ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮನಸಾ ಕೊಡವೂರು ಕಲಾವಿದರಿಂದ ‘ಈದಿ’ ನಾಟಕ ಪ್ರದರ್ಶನಗೊಂಡಿತು.

 

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles