ಉಡುಪಿ: ದೋಣಿಗಳು ಹಾಗೂ ಮೀನುಗಾರಿಕಾ ನೌಕೆಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ನದಿ ಮುಖಗಳಲ್ಲಿ ಸಂಗ್ರಹವಾಗಿರುವ ಮರಳಿನ ದಿಬ್ಬಗಳನ್ನು ತೆರವುಗೊಳಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸ್ಪಷ್ಟಪಡಿಸಿದೆ. ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಸರ್ಕಾರ, ಸಿಆರ್‌ಝೆಡ್ ಅಧಿಸೂಚನೆ–2019ರ ನಿಯಮಾವಳಿಗಳಡಿ ಪೂರ್ವಾನುಮತಿ ಪಡೆದು ಸಿಆರ್‌ಝೆಡ್–II, ಸಿಆರ್‌ಝೆಡ್–III ಹಾಗೂ ಸಿಆರ್‌ಝೆಡ್–IV ವ್ಯಾಪ್ತಿಯ ನದಿ ಮುಖಗಳಲ್ಲಿ ನಿರ್ಮಾಣವಾಗಿರುವ ಮರಳಿನ ದಿಬ್ಬಗಳನ್ನು ತೆರವುಗೊಳಿಸಲು ಅವಕಾಶವಿದೆ ಎಂದು ತಿಳಿಸಿದೆ.

ಇದೇ ವೇಳೆ 2022ರ ನವೆಂಬರ್ 24ರ ತಿದ್ದುಪಡಿ ಅಧಿಸೂಚನೆ ಅನ್ವಯ, ದ್ವೀಪ ಹಾಗೂ ಕರಾವಳಿ ನಿಯಂತ್ರಣ ವಲಯಗಳಲ್ಲಿಯೂ ಸಾಂಪ್ರದಾಯಿಕ ಹಾಗೂ ಯಾಂತ್ರೀಕೃತವಲ್ಲದ ವಿಧಾನಗಳ ಮೂಲಕ ಮರಳು ತೆರವುಗೊಳಿಸಲು ಅನುಮತಿ ನೀಡಲಾಗಿದೆ ಎಂದು ಸಚಿವಾಲಯ ವಿವರಿಸಿದೆ. ಮರಳು ತೆರವು ಕಾರ್ಯಕ್ಕೆ ರಾಜ್ಯ ಸರ್ಕಾರಗಳು ಸಂಬಂಧಿತ ಇಲಾಖೆಗಳ ಅನುಮತಿ ಪಡೆದು, ಸ್ಥಳೀಯ ಸಮುದಾಯದ ನೋಂದಾಯಿತ ಸದಸ್ಯರಿಗೆ ನಿಗದಿತ ಪ್ರದೇಶ ಹಾಗೂ ಅವಧಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬಹುದಾಗಿದೆ. ವಾರ್ಷಿಕ ನವೀಕರಣದ ಷರತ್ತುಗಳೊಂದಿಗೆ ಈ ಪ್ರಕ್ರಿಯೆ ಜಾರಿಯಾಗಲಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ಕರಾವಳಿ ಭಾಗದ ನದಿ ಮುಖಗಳಲ್ಲಿ ಮರಳಿನ ದಿಬ್ಬಗಳಿಂದ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಉಂಟಾಗುತ್ತಿರುವ ಸಮಸ್ಯೆ ಹಿನ್ನೆಲೆಯಲ್ಲಿ ಈ ವಿಷಯವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು. ಇದೀಗ ಕೇಂದ್ರ ಸರ್ಕಾರ ನೀಡಿರುವ ಸ್ಪಷ್ಟನೆಯಿಂದ ಕರಾವಳಿ ಭಾಗದ ಬಹುಕಾಲದ ಬೇಡಿಕೆಗೆ ಸ್ಪಂದಿಸಿದಂತಾಗಿದೆ.


