ಉಡುಪಿ : ನಗರದ ದೊಡ್ಡಣಗುಡ್ಡೆ ಪುಷ್ಟ ಹರಾಜು ಕೇಂದ್ರದ ಆವರಣದಲ್ಲಿ ಸಾಲುಮರದ ತಿಮ್ಮಕ್ಕ ವಿಷಯಾಧಾರಿತ ತೋಟಗಾರಿಕೆ ಫಲಪುಷ್ಪ ಪ್ರದರ್ಶನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್. ಹೆಬ್ಬಾಳಕರ್ ಅವರು ಶುಕ್ರವಾರ ಉದ್ಘಾಟನೆ ನೆರವೇರಿಸಿದರು. ಮೂರು ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಅವರು ಶುಭ ಹಾರೈಸಿದರು.

ಪ್ರದರ್ಶನದಲ್ಲಿ ಸಾಲುಮರದ ತಿಮ್ಮಕ್ಕ ಅವರ ಜೀವನ ಹಾಗೂ ಪರಿಸರ ಸಂರಕ್ಷಣೆಯ ಸಾಧನೆಯನ್ನು ಬಿಂಬಿಸುವ ವಿಶೇಷ ಕಲಾಕೃತಿಗಳನ್ನು ಮೈಸೂರಿನ ಕಲಾವಿದರು ರೂಪಿಸಿದ್ದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತಿಮ್ಮಕ್ಕ ಅವರ ಬದುಕಿನ ಪಯಣವನ್ನು ಸ್ಮರಿಸುವಂತೆ ಪ್ರದರ್ಶಿಸಲಾಗಿದೆ. ಈ ಕಲಾಕೃತಿಗಳು ವೀಕ್ಷಕರನ್ನು ಆಕರ್ಷಿಸುತ್ತಿವೆ.

ಅಪರೂಪದ ಹಣ್ಣುಗಳ ಪ್ರದರ್ಶನ, ರೈತರು ತಂದುಕೊಟ್ಟ ವಿವಿಧ ಪ್ರದರ್ಶಿಕೆಗಳು, ಜಾನೂರು ಕಲಾ ರಚನೆ, ಡೋರೇಮಾನ್, ಜೇಂಕಾರ ಸೇರಿದಂತೆ ಹಲವು ಆಕರ್ಷಕ ವ್ಯವಸ್ಥೆಗಳು ಸಾರ್ವಜನಿಕರನ್ನು ಕೈಬಿಸಿ ಕರೆಯುತ್ತಿವೆ. ಸ್ಥಳೀಯವಾಗಿ ಉತ್ಪಾದಿಸಿದ ಗೊಂಡೆ ಹೂಗಳು, ಪೆಟೂನಿಯಾ, ಇಂಪೇಶಿಯನ್ಸ್, ಡಯಾಂಥಸ್, ಕಲಾಂಚೋ ಸೇರಿದಂತೆ ಸಾವಿರಾರು ಬಗೆಯ ಹೂವಿನ ಕುಂಡಗಳನ್ನು ಸೊಗಸಾಗಿ ಅಲಂಕರಿಸಲಾಗಿದೆ.

ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಮೂರು ದಿನಗಳ ಕಾಲ ಸಾರ್ವಜನಿಕರಿಗೆ ಮುಕ್ತವಾಗಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಮಕ್ಕಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.





