ಉಡುಪಿ : ಮಹಿಳೆಯೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ, ಯಕ್ಷಗಾನ ಕಲಿತ ಮಹಿಳೆ ತನ್ನ ಕುಟುಂಬಕ್ಕೆ ಉತ್ತಮ ಮೌಲ್ಯಗಳನ್ನು ಸಾರಬಲ್ಲಳು. ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಯಕ್ಷಗಾನ ಕಲಿಕೆ ಅತ್ಯಂತ ಅಗತ್ಯ. ಯಕ್ಷಗಾನವು ಜ್ಞಾನಭಂಡಾರವಾಗಿದ್ದು, ಮಹಿಳೆಯರು ಇದನ್ನು ಕಲಿತರೆ ಕುಟುಂಬ ಹಾಗೂ ಸಮಾಜಕ್ಕೆ ಸಂಸ್ಕಾರದ ದಾರಿ ತೆರೆದುಕೊಳ್ಳುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಸಾಲಿಗ್ರಾಮದ ಗುಂಡ್ಮಿ ಸದಾನಂದ ರಂಗಮಂಟಪದಲ್ಲಿ ಮಹಿಳೆಯರಿಂದ ಯಕ್ಷಗಾನ ಶೂರ್ಪನಖಾ ಮಾನಭಂಗ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಸಂಬಂಧಗಳು ಸಡಿಲವಾಗುತ್ತಿರುವ ಹಿನ್ನೆಲೆ, ಯಕ್ಷಗಾನದಂತಹ ಕಲೆಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತವೆ. ಶಿಕ್ಷಣದ ಜೊತೆಗೆ ಇಂತಹ ಕಲೆಗಳನ್ನು ಕಲಿಸುವುದು ಅವರ ಸಮಗ್ರ ಬೆಳವಣಿಗೆಗೆ ಸಹಕಾರಿ ಎಂದು ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ್ ಗುಂಡ್ಮಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವತ ಗಣೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವು ಕಲಾಪೀಠ ಕೋಟ ಸಂಯೋಜನೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಪ್ರಾಯೋಜಕತ್ವದಲ್ಲಿ, ಕೆ. ನರಸಿಂಹ ತುಂಗ ಅವರ ನಿರ್ದೇಶನದಲ್ಲಿ ನಡೆಯಿತು. ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳದಲ್ಲಿ ಬಿಲ್ಲಾಡಿ ಗಣೇಶ್ ಆಚಾರ್ಯ, ಗಣೇಶ್ ಶೆಣೈ, ವಾಗ್ವಿಲಾಸ ಭಟ್ಟ ಹಾಗೂ ಮುಮ್ಮೇಳದಲ್ಲಿ ವೃಂದಾ, ಅನುಷಾ, ಮಾನ್ಯ, ನಮನ, ಜಾಹ್ನವಿ, ಸುಜಾತಾ, ಮೇಧಾ, ಧನುಶ್ರೀ, ಇಂಚರ, ಆರಭಿ, ಈಶಾನಿ, ತನಿಷಾ ಭಾಗವಹಿಸಿ ಮನಮೋಹಕ ಪ್ರದರ್ಶನ ನೀಡಿದರು.



