ಉಡುಪಿ: ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಿದ್ಯಾರ್ಥಿಗಳಲ್ಲಿ ರ‍್ಯಾಗಿಂಗ್‌ನ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಸುರಕ್ಷಿತ ಮತ್ತು ಸೌಹಾರ್ದಯುತ ಕಾಲೇಜು ವಾತಾವರಣವನ್ನು ಬೆಳೆಸುವುದು ಮತ್ತು ಸಂಸ್ಥೆಯ ರ‍್ಯಾಗಿಂಗ್ ನಿಷೇಧ ಬದ್ಧತೆಯನ್ನು ಪುನರುಚ್ಛರಿಸುವುದು ಉದ್ದೇಶದಿಂದ ರ‍್ಯಾಗಿಂಗ್ ತಡೆಗಟ್ಟುವ ಸಮಿತಿಯ ವತಿಯಿಂದ ಆಂಟಿ ರ‍್ಯಾಗಿಂಗ್ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಶುಂಪಾಲರಾದ ಡಾ. ಮಮತಾ ಕೆ.ವಿ.ಯವರು ಮಾತನಾಡಿ, ರ‍್ಯಾಗಿಂಗ್ ಯಾವುದೇ ರೂಪದಲ್ಲಿ ಕೂಡ ನಮ್ಮ ಸಂಸ್ಥೆಯಲ್ಲಿ ಅಸ್ವೀಕಾರ. ನಮ್ಮ ಸಂಸ್ಥೆಯ ಮೌಲ್ಯಗಳಿಗೆ ವಿರುದ್ಧ ಎಂದು ಒತ್ತಿ ಹೇಳಿದರು. ವಿದ್ಯಾರ್ಥಿಗಳು ಪರಸ್ಪರ ಗೌರವ, ಸೌಹಾರ್ದ ಹಾಗೂ ಏಕತೆಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಸುರಕ್ಷಿತ ಹಾಗೂ ಸ್ನೇಹಪರ ವಾತಾವರಣವೇ ಶೈಕ್ಷಣಿಕ ಶ್ರೇಷ್ಠತೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಅವಶ್ಯಕ ಎಂದು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್.ರವರು ರ‍್ಯಾಗಿಂಗ್ ನಿಷೇಧಕ್ಕೆ ಸಂಬಂಧಿಸಿದ ಕಾನೂನು ಪ್ರವಧಾನಿಕೆಗಳು, ಸಂಸ್ಥೆಯ ಮಟ್ಟದಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವಿವರಿಸಿದರು. ಕಾಲೇಜಿನ ಆಡಳಿತ ಮುಖ್ಯಾಧಿಕಾರಿಯಾದ ಡಾ. ಪ್ರಶಾಂತ್ ಕೆ. ಮಾತನಾಡಿ ಆಂಟಿ ರ‍್ಯಾಗಿಂಗ್ ಸಪ್ತಾಹದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಸಮಾರೋಪ ಸಮಾರಂಭ
ಆಂಟಿ ರ‍್ಯಾಗಿಂಗ್ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ.ಯವರು ರ‍್ಯಾಗಿಂಗ್ ವಿದ್ಯಾರ್ಥಿಗಳ ಮೇಲೆ ಬೀರುವ ಮಾನಸಿಕ ಮತ್ತು ಭಾವನಾತ್ಮಕ ಪರಿಣಾಮಗಳ ಕುರಿತು ಮಾತನಾಡಿದರು. ರ‍್ಯಾಗಿಂಗ್ ಒಂದು ನಿಯಮ ಉಲ್ಲಂಘನೆ ಮಾತ್ರವಲ್ಲ, ಅದು ವಿದ್ಯಾರ್ಥಿಯ ಗೌರವ, ಆತ್ಮವಿಶ್ವಾಸ ಹಾಗೂ ಮಾನಸಿಕ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡುತ್ತದೆ. ಇದರಿಂದಾಗಿ ಅನೇಕರು ಭಯ, ಆತಂಕ ಹಾಗೂ ದೀರ್ಘಕಾಲದ ಮಾನಸಿಕ ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ಇದೆ. ಅವರು ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್‌ನ್ನು ಯಾವುದೇ ಹಂತದಲ್ಲೂ ಸಹಿಸಬಾರದು, ಪೋಷಿಸಬಾರದು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ವಕೀಲ ಗುರುರಾಜ ಐತಾಳ್‌ರವರು ರ‍್ಯಾಗಿಂಗ್ ಕುರಿತ ನಿಯಮಗಳು ಮತ್ತು ಕಾನೂನು ಬದ್ಧ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನನೀಯವಾದ ಉಪನ್ಯಾಸ ನೀಡಿದರು. ರ‍್ಯಾಗಿಂಗ್‌ನ್ನು ಭಾರತದಲ್ಲಿ ಅಪರಾಧ ಎಂದು ಪರಿಗಣಿಸಲಾಗಿದ್ದು. ಅಪರಾಧಗಳ ನಿಲ್ಲಿಸುವಿಕೆ, ಕಾಲೇಜಿನಿಂದ ಹೊರಹಾಕುವಿಕೆ, ದಂಡ ಅಥವಾ ಸೆರೆ ಶಿಕ್ಷೆ ಸೇರಿದಂತೆ ಗಂಭೀರ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಆಂಟಿ ರ‍್ಯಾಗಿಂಗ್ ಸಪ್ತಾಹದ ಅಂಗವಾಗಿ ಪೋಸ್ಟರ್ ತಯಾರಿಕಾ ಸ್ಪರ್ಧೆ, ರೀಲ್ ತಯಾರಿಕಾ ಸ್ಪರ್ಧೆ, ರ‍್ಯಾಗಿಂಗ್ ವಿರುದ್ಧ ಜಾಗೃತಿ ಮೂಡಿಸುವ ಬೀದಿ ನಾಟಕ, ಫೋಟೋಗ್ರಫಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಅತಿಥಿ ಉಪನ್ಯಾಸ ಹಾಗೂ ಸೆಲ್ಪಿ ಅಭಿಯಾನ ಮುಂತಾದ ಕಾರ್ಯಕ್ರಮಗಳನ್ನು ವಾರಪೂರ್ತಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಕಾಲೇಜು ಪರಿಸರವನ್ನು ಸುರಕ್ಷಿತ, ಸಹಾನುಭೂತಿ ಪೂರ್ಣ ಹಾಗೂ ರ‍್ಯಾಗಿಂಗ್ ಮುಕ್ತವಾಗಿಡುವುದಾಗಿ ಶಪಥ ಮಾಡಿದರು. ಈ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಂದ ಉತ್ಸಾಹಭರಿತ ಭಾಗವಹಿಸುವಿಕೆ ಕಂಡು ಬಂತು. ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕರಾದ ಡಾ. ರವಿ ಕೆ.ವಿ.ಯವರು ಸಂಯೋಜಿಸಿದರು.