ಉಡುಪಿ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅಮಾಸೆಬೈಲಿನ ಸರ್ಕಾರಿ ಪ್ರೌಢಶಾಲಾ ವಠಾರದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಆಗುಂಬೆ ವನ್ಯಜೀವಿ ವಲಯ ಹಾಗೂ ಶಾಲೆಯ ಸಂಯುಕ್ತ ಆಶ್ರಯದಲ್ಲಿ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ವಿಶೇಷ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಕಾರ್ಯಕ್ರಮಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕೊಡ್ಗಿ ವಿದ್ಯಾರ್ಥಿಗಳೊಂದಿಗೆ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡವನ್ನು ನೆಟ್ಟು ಅದರ ಪೋಷಣೆ ಮಾಡಬೇಕು ಎಂದು ಕರೆ ನೀಡಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ಪರಿಸರ ಪ್ರಜ್ಞೆ ಬೆಳೆಸಿದರೆ ಹಸಿರು ಭಾರತ ನಿರ್ಮಾಣ ಸಾಧ್ಯ. ಇಂದು ನೆಡುವ ಒಂದು ಗಿಡ ಮುಂದಿನ ಪೀಳಿಗೆಗೆ ನೀಡುವ ಅಮೂಲ್ಯ ಕೊಡುಗೆಯಾಗಿದೆ ಎಂದರು.

ಅರಣ್ಯ ಇಲಾಖೆಯ ಈ ಕಾರ್ಯಕ್ರಮ ಮಾದರಿಯಾಗಿದ್ದು, ಶಾಲಾ ಹಂತದಲ್ಲೇ ಪರಿಸರ ಪ್ರೇಮ ಮತ್ತು ಪ್ರಕೃತಿ ಸಂರಕ್ಷಣೆಯ ಮೌಲ್ಯಗಳನ್ನು ಬೆಳೆಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು. ನೆಟ್ಟ ಗಿಡಗಳನ್ನು ತಮ್ಮ ತಾಯಿಯಂತೆ ಕಾಳಜಿಯಿಂದ ಆರೈಕೆ ಮಾಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅರಣ್ಯ ಅಧಿಕಾರಿ ರೂಪೇಶ್, ಶಾಲಾ ಮುಖ್ಯೋಪಾಧ್ಯಾಯ ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಕುಮಾರ್ ಭಾಗವತ್, ಶಾಲಾ ಶಿಕ್ಷಕ ವೃಂದ, ಅರಣ್ಯ ಇಲಾಖೆಯ ಸಿಬ್ಬಂದಿ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಳ್ಳಲಾಯಿತು.



