ಬೈಂದೂರು : ಯಕ್ಷಗಾನ ಕಲಾರಂಗ ಬೈಂದೂರು ತಾಲೂಕಿನ ಗೋಳಿಹೊಳೆಯ ವಿದ್ಯಾಷಕ್ ದ್ವಿತೀಯ ಪಿಯುಸಿ ವಿದ್ಯಾರ್ಥಿ ವರದ ಎಂ. ಎನ್. ಇವನಿಗೆ ರೂಪಾಯಿ 6,00,000/- ವೆಚ್ಚದಲ್ಲಿ
ಸಂಸ್ಥೆಯ ದಾನಿಗಳಾದ ಮಂಗಳೂರಿನ ಪಿ. ಗೋಕುಲನಾಥ ಪ್ರಭುಗಳು ತಮ್ಮ 70ನೆಯ ವರ್ಷಾಚರಣೆಯ ಸಂದರ್ಭದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ ‘ಗೋಕುಲ ನಿಲಯದ’ದ ಉದ್ಘಾಟನೆ
ಜರಗಿತು. ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಉದ್ಯಮಿ ಗೋಕುಲನಾಥ ಪ್ರಭುಗಳು ಇದು ನನ್ನ ಪತ್ನಿ ನಿವೇದಿತಾಳ ಸೂಚನೆ, ಅರ್ಹ ಫಲಾನುಭವಿಗೆ ಮನೆ ನಿರ್ಮಿಸಿಕೊಟ್ಟ ಧನ್ಯತೆ ನಮಗಾಗಿದೆ. ಯಕ್ಷಗಾನ ಕಲಾರಂಗಕ್ಕೆ ನೀಡಿದ ಪ್ರತಿಯೊಂದು ಪೈಸೆಯೂ ಸದ್ವಿನಿಯೋಗವಾಗುತ್ತದೆ ಎಂಬುದನ್ನು ಮನಗಂಡಿದ್ದೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಯಕ್ಷಗಾನ ಕಲಾರಂಗಕ್ಕೆ ಕಲಾರಂಗವೇ ಸಾಟಿ ಇಂತಹ ಇನ್ನೊಂದು ಸAಸ್ಥೆಯನ್ನು ನಾನು ಕಂಡಿಲ್ಲ. ಪಾರದರ್ಶಕ ವ್ಯವಹಾರ
ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಧಾವಿಸುವ ಗುಣದಿಂದ ದಾನಿಗಳನ್ನು ಆಕರ್ಷಿಸಿದೆ. ಈಗಾಗಲೆ ಒಂದು ಮನೆಯನ್ನು ನಿರ್ಮಿಸಿಕೊಟ್ಟ ದಾನಿಗಳಾದ ಡಾ. ಜೆ. ಎನ್. ಭಟ್ ಇದನ್ನು
ಉಪಯೋಗಿಸಿಕೊಂಡು ಚೆನ್ನಾಗಿ ಕಲಿತು ಬದುಕಿನಲ್ಲಿ ಸಾಧನೆ ಮಾಡಿ ತೋರಿಸಬೇಕೆಂದು ಫಲಾನುಭವಿ ವಿದ್ಯಾರ್ಥಿಗೆ ಕಿವಿಮಾತು ಹೇಳಿದರು.

ಅತಿಥಿ ನಿವೃತ್ತ ಬ್ಯಾಂಕ್ ಅಧಿಕಾರಿ ನಂದನ ಕಾಮತ್ ತನ್ನ ಒಡನಾಡಿ ಸ್ನೇಹಿತ ಗೋಕುಲನಾಥ ಪ್ರಭುಗಳ ಸರಳ ಸಜ್ಜನಿಕೆಯನ್ನು ಕೊಂಡಾಡಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸಪ್ತತಿಯ ಶುಭಾವಸರದಲ್ಲಿರುವ ಗೋಕುಲನಾಥ ಪ್ರಭುಗಳನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಎಸ್. ವಿ. ಭಟ್, ಕೆ. ಸದಾಶಿವ ರಾವ್, ಯು. ವಿಶ್ವನಾಥ ಶೆಣೈ, ಕಿಶೋರ್ ಕನ್ನರ್ಪಾಡಿ ಮತ್ತು ಅರೆಶಿರೂರಿನ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯ ಅಧ್ಯಾಪಕಿ ಶ್ರೀಮತಿ ಗೀತಾ ಉಪಸ್ಥಿತರಿದ್ದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಪ್ರಾಸ್ತಾವಿಕ
ಮಾತುಗಳೊಂದಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.


