ಉಡುಪಿ: 2014ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಆಶಿಕ್ ವಿರುದ್ಧ ನ್ಯಾಯಾಲಯದಿಂದ ವಿಧಿಸಲಾದ 20 ಲಕ್ಷ ರೂಪಾಯಿ ಹಾಗೂ ಅದರ ಬಡ್ಡಿ ಮೊತ್ತವನ್ನು ಜಮಾ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಡಿಸೆಂಬರ್ 09 ರಂದು ಈ ಕುರಿತು ನ್ಯಾಯಾಲಯದ ತೀರ್ಪು ಪ್ರಕಟವಾಗಿದ್ದು, ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ಹಾಗೂ ಹಣವನ್ನು ಪಾವತಿಸದೇ ಇರುವ ಹಿನ್ನೆಲೆ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ದಸ್ತಗಿರಿ ಮಾಡಿ ಡಿಸೆಂಬರ್ 17 ರೊಳಗೆ ಉಡುಪಿ ಪಿಸಿಜೆ ಮತ್ತು ಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಮಲ್ಪೆ ಪೊಲೀಸ್ ಠಾಣೆಗೆ ಸೂಚನಾ ಪತ್ರದ ಮೂಲಕ ಆದೇಶಿಸಿತ್ತು.

ನ್ಯಾಯಾಲಯದ ಸೂಚನೆಯಂತೆ ವಾರಂಟು ಜಾರಿಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಯ ಬ್ರಹ್ಮಾವರದ ನಿವಾಸಕ್ಕೆ ತೆರಳಿದ ವೇಳೆ, ಅಲ್ಲಿದ್ದ ಇಬ್ಬರು ಮಹಿಳೆಯರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪದಡಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಬಿಲ್ಲವ ಸಮಾಜದ ವಿವಿಧ ಸಂಘಟನೆಗಳು, ಚುನಾಯಿತ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಮುಖಂಡರು ಹಾಗೂ ರಾಜಕೀಯ ಪಕ್ಷಗಳ ನಾಯಕರು ಪ್ರಕರಣದ ಕುರಿತು ವಿವಿಧ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸಿ, ತನಿಖೆಯನ್ನು ಬ್ರಹ್ಮಾವರ ಪೊಲೀಸ್ ಠಾಣೆಯಿಂದ ಹಿಂಪಡೆದು ಸೂಕ್ತವಾದ ಇನ್ನೊಬ್ಬ ತನಿಖಾಧಿಕಾರಿಗೆ ವರ್ಗಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ, ಸಂತ್ರಸ್ತ ಮಹಿಳೆಯರು ಪೊಲೀಸ್ ಸಿಬ್ಬಂದಿಯ ವಿರುದ್ಧ ಮಾಡಿರುವ ಆರೋಪಗಳ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಪ್ರತ್ಯೇಕ ವಿಚಾರಣೆ ನಡೆಸಲಾಗುವುದು. ವಿಚಾರಣೆಯಲ್ಲಿ ಯಾವುದೇ ಲೋಪಗಳು ಕಂಡುಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ರು ತಿಳಿಸಿದ್ದಾರೆ. ನ್ಯಾಯ ಒದಗಿಸುವ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲ ಅಥವಾ ಅನಗತ್ಯ ಅನುಮಾನಕ್ಕೆ ಆಸ್ಪದವಿಲ್ಲ ಎಂದು ಈ ಪತ್ರಿಕಾ ಪ್ರಕಟಣೆಯ ಮೂಲಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



