ಉಡುಪಿ : ವಾಟ್ಸಾಪ್ ಮೂಲಕ ಬಂದಿದ್ದ ಆರ್‌ಟಿಒ ಹೆಸರಿನ ಸಂದೇಶವನ್ನು ತೆರೆಯಲು ಯತ್ನಿಸಿದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು 5.63 ಲಕ್ಷ ಕಳೆದುಕೊಂಡ ಘಟನೆ ಕಾರ್ಕಳದಲ್ಲಿ ವರದಿಯಾಗಿದೆ.

ಕಾರ್ಕಳ ನಿವಾಸಿ ವಾಸುದೇವ ಅವರಿಗೆ ಮೊಬೈಲ್‌ಗೆ ಆರ್‌ಟಿಒಗೆ ಸಂಬಂಧಿಸಿದಂತೆ, ಪಿಡಿಎಫ್ ದಾಖಲೆ ಇರುವ ವಾಟ್ಸಾಪ್ ಸಂದೇಶವೊಂದು ಬಂದಿತ್ತು. ಸಂದೇಶವನ್ನು ತೆರೆಯಲು ಪ್ರಯತ್ನಿಸಿದರೂ ಅದು ತೆರೆದಿರಲಿಲ್ಲ. ಬಳಿಕ ಅವರ ಮೊಬೈಲ್‌ಗೆ ಹಲವು ಒಟಿಪಿ ಸಂಖ್ಯೆಗಳು ಬಂದಿದೆ. ಬಳಿಕ ಕೆಲವೇ ಸಮಯದಲ್ಲಿ ಕಾರ್ಕಳದ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 5,63,117 ಹಣ ಕಡಿತಗೊಂಡಿರುವುದು ಗಮನಕ್ಕೆ ಬಂದಿದೆ. ತಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿರುವುದನ್ನು ಕಂಡು ಆತಂಕಗೊಂಡ ವಾಸುದೇವ ಅವರು ಪರಿಶೀಲನೆ ನಡೆಸಿದಾಗ, ಅಪರಿಚಿತರು ಮೋಸದ ಮೂಲಕ ಖಾತೆಯಲ್ಲಿದ್ದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ವಾಸುದೇವ ಅವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್ ವಂಚಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಅಪರಿಚಿತ ಮೂಲಗಳಿಂದ ಬರುವ ಪಿಡಿಎಫ್, ಲಿಂಕ್ ಅಥವಾ ಅಪ್ಲಿಕೇಶನ್‌ಗಳನ್ನು ತೆರೆಯುವಾಗ ಎಚ್ಚರಿಕೆ ವಹಿಸಬೇಕು. ಒಟಿಪಿ, ಬ್ಯಾಂಕ್ ವಿವರಗಳು ಅಥವಾ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.



