Friday, July 4, 2025

spot_img

ವಚನ ಸಾಹಿತ್ಯದ ಪ್ರಚಾರದಲ್ಲಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಡಾ.ಫ.ಗು ಹಳಕಟ್ಟಿ : ಅಬೀದ್ ಗದ್ಯಾಳ್

ಉಡುಪಿ: ವಚನಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಮಹತ್ವವಾದ ಘಟ್ಟವಾಗಿದ್ದು, ತತ್ವ ಸಿದ್ದಾಂತವನ್ನು ಜನಸಾಮಾನ್ಯರಿಗೆ ಸರಳವಾಗಿ ಮನದಟ್ಟು ಮಾಡುವಲ್ಲಿ ವಚನ ಸಾಹಿತ್ಯ ಬಹಳ ಪ್ರಮುಖವಾಗಿದೆ. ಡಾ.ಫ.ಗು ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸಿ ಶರಣರ ವಚನಗಳ ಪ್ರಚಾರ ಮಾಡಲು ತಮ್ಮ ಬದುಕನ್ನು ಮುಡಿಪಾಗಿಟ್ಟವರು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಹೇಳಿದರು. ಅವರು ಇಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎ.ವಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನ – ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿ, ಡಾ.ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು. ವಚನ ಸಾಹಿತ್ಯಗಳು ಸಮಾಜದಲ್ಲಿ ಅನೇಕ ರೀತಿಯಲ್ಲಿ ಸುಧಾರಣೆಯನ್ನು ತಂದಿದ್ದು, ಇಂತಹ ವಚನಗಳನ್ನು ಸಂಶೋಧಿಸಿ ಅವುಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅದ್ಭುತ ಕೆಲಸವನ್ನು ಮಾಡಿದ ಮಹಾನೀಯರಾದ ಡಾ.ಫ.ಗು.ಹಳಕಟ್ಟಿಯವರನ್ನು ನೆನೆಯುವ ಉದ್ದೇಶದಿಂದ ಅವರ ಜನ್ಮ ದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.

ವಚನ ಸಾಹಿತ್ಯವು ಪ್ರಜಾಪ್ರಭುತ್ವವಾದಿ ನಿಲುವಿನ ಸಾಹಿತ್ಯ. ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡ ಸಾಹಿತ್ಯವಾಗಿದೆ. ಬಸವಾದಿ ಶಿವಶರಣೆಯರ ವಚನಗಳನ್ನು ವಿದ್ಯಾರ್ಥಿಗಳು ಓದಿ ಅವುಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಡಾ.ಟಿ.ಎಂ.ಎ ಪೈ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್, ಅತ್ಯಂತ ಸರಳ ಜೀವನ ಜೀವಿಸಿದ ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ತಮ್ಮ ಸ್ವಂತ ಹಣದಿಂದ ಮುದ್ರಣ ಮಾಡುವುದರೊಂದಿಗೆ, ವಚನಗಳಿಗೆ ಬಿಡುಗಡೆ ಭಾಗ್ಯ ಒದಗಿಸಿದರು. ಕನ್ನಡ ಸಾಹಿತ್ಯದ ಏಳಿಗೆಗಾಗಿ ಶ್ರಮಿಸುವುದರ ಜೊತೆಗೆ ಕರ್ನಾಟಕದ ಏಕೀಕರಣಕ್ಕಾಗಿ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸಿ, ಕನ್ನಡಿಗರಲ್ಲಿ ಕವಿದಿದ್ದ ವಿಸ್ಮೃತಿ ಪೊರೆಯನ್ನು ಕಳಚಿ, ಕನ್ನಡ ಸಾಹಿತ್ಯದ ಮಹತ್ವದ ಕುರಿತು ಅರಿವು ಮೂಡಿಸಿದರು ಎಂದರು.

ವಚನಗಳು ಅಧ್ಯಾತ್ಮಿಕ ಸಾಹಿತ್ಯ, ಯುವ ಪೀಳಿಗೆಯು ವಚನಗಳನ್ನು ಓದಿ ಜೀವನ ಪಾಠಗಳನ್ನು ಅಳವಡಿಸುವುದರ ಮೂಲಕ ವಚನ ಸಾಹಿತ್ಯವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದ ಅವರು ಇಂದಿನ ಪೀಳಿಗೆಯು ಅವರು ತೋರಿದ ಬದುಕಿನ ಆದರ್ಶಗಳ ದಾರಿಯಲ್ಲಿ ಮುನ್ನಡೆಯಬೇಕು ಎಂದರು. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ. ನಿರಂಜನ್, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಕಾಲೇಜಿನ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ರಾಮಾಂಜಿ ನಿರೂಪಿಸಿದರೆ, ತೆಂಕನಿಡಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles