ಕೋಟ: ಪಂಚವರ್ಣ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ರೈತರಿಗೆ ಪೋತ್ಸಾಹಕರ ವಾತಾವರಣ ಸೃಷ್ಠಿಸಿದೆ ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಹೇಳಿದರು.

ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ,ರೈತ ಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಇವರ ಸಹಯೋಗದೊಂದಿಗೆ 48ನೇ ರೈತರೆಡೆಗೆ ನಮ್ಮ ನಡಿಗೆ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿ ತೆರೆಯ ಮರೆಯಲ್ಲಿರುವ ರೈತರನ್ನು ಹುಡುಕಿ ಗುರುತಿಸುವ ಕಾಯಕ ಅತ್ಯಂತ ಶ್ಲಾಘನೀಯ ಕಾರ್ಯ, ಪಂಚವರ್ಣ ಸಾಮಾಜಿಕ ಕಾರ್ಯ, ನಿರಂತರ ಸ್ವಚ್ಛತೆ ಮತ್ತು ಹಸಿರು ಅಭಿಯಾನ ಮನೆಮಾತಾಗಿ ಬೆಳೆದಿದೆ ಎಂದು ಸಾಧಕ ರೈತ ಮಹಿಳೆ ಶಾರದ ಶೆಟ್ಟಿಗೆ ರೈತಪುರಸ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಗೋ ಮಾತೆ ಪೂಜೆ ನೆರವೆರಿಸಿಕೊಂಡು, ಗಿಡನೆಟ್ಟು ಪರಿಸರ ಜಾಗೃತಿ ಮೆರೆಯಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಮತ್ತು ಹೈನುಗಾರಿಕಾ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ಮಹಿಳಾ ಕೃಷಿಕರಾದ ಶಾರದ ಶೆಟ್ಟಿಯವರನ್ನು ಗಣ್ಯರ ಸಮ್ಮುಖದಲ್ಲಿ ಕೃಷಿ ಪರಿಕರಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ದೀಪ ಬೆಳಗಿಸಿ ಚಾಲನೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಯಕ್ಷಗುರು ಸೀತಾರಾಮ ಶೆಟ್ಟಿ ಕೊಯ್ಕೂರು,ಕೊಯ್ಕೂರು ಬೊಬ್ಬರ್ಯರೇಶ್ವರ ದೇಗುಲದ ಅಧ್ಯಕ್ಷ ಸದಾಶಿವ ಶೆಟ್ಟಿ, ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ಮಹೇಶ್ ಶೆಟ್ಟಿ,ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಸ್ಥಳೀಯರಾದ ವಿಜಯ ಕುಮಾರ್ ಶೆಟ್ಟಿ ಸ್ವಾಗತಿಸಿ ಅಭಿನಂದನಾ ನುಡಿಗಳನ್ನಾಡಿದರು. ಪಂಚವರ್ಣದ ಸದಸ್ಯ ಕೇಶವ ಆಚಾರ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮವನ್ನು ಸಂಘದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ನಿರೂಪಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.