ಉಡುಪಿ: ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದಲ್ಲಿ ರೈತರ ಸಹಭಾಗಿತ್ವದಲ್ಲಿ ಭತ್ತದ ಚಾಪೆನೇಜಿ ತಯಾರಿ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾದ ಡಾ. ರೇವಣ್ಣ ರೇವಣ್ಣವರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿನ ಆಸಕ್ತಿ ಕಡಿಮೆಯಾಗುತ್ತಿರುವುದರಿಂದ ಭತ್ತದ ಬೆಳೆಯ ಉತ್ಪಾದನೆ ಕುಂಠಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಧನಂಜಯ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ಭತ್ತದ ಯಾಂತ್ರೀಕೃತ ಕೃಷಿಯ ಮಹತ್ವ ಹಾಗೂ ಮಣ್ಣಿನ ಕೊರತೆಯ ಪರಿಸ್ಥಿತಿಯಲ್ಲಿ ಉಮಿಕರಿ ಬಳಸಿ ಚಾಪೆನೇಜಿ ತಯಾರಿಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸುಧೀರ್ ಕಾಮತ್ ಕೆ.ವಿ. ಮಾತನಾಡಿ, ಕರಾವಳಿಯಲ್ಲಿ ಭತ್ತದ ಕೃಷಿ ಕುಂಠಿತವಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಬೀಜ, ಸರಿಯಾದ ಸಮಯದಲ್ಲಿ ಬಿತ್ತನೆ ಹಾಗೂ ನಾಟಿ ವಿಧಾನಗಳನ್ನು ಅಳವಡಿಸಿಕೊಂಡು ವೈಜ್ಞಾನಿಕ ಕೃಷಿ ಕ್ರಮಗಳನ್ನು ಅನುಸರಿಸಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರಾಧಿಕಾರಿ ಡಾ. ನವೀನ್ ಎನ್.ಇ. ಅವರು, ಭತ್ತದ ಬೇಸಾಯದ ಪೂರ್ವ ತಯಾರಿ, ಬೆಳೆ ನಿರ್ವಹಣೆ ಹಾಗೂ ವೈಜ್ಞಾನಿಕ ಸಮಸ್ಯೆಗಳಿಗೆ ಪರಿಹಾರ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಪ್ರಗತಿಪರ ರೈತರಾದ ಶ್ರೀ ರಾಘವೇಂದ್ರ ಹಾಲಾಡಿ ಅವರು ಉಮಿಕರಿ ಬಳಸಿ ಚಾಪೆನೇಜಿ ತಯಾರಿಸುವ ತಮ್ಮ ಹೊಸ ಪ್ರಯೋಗದ ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕರಾದ ಡಾ. ಮೋಹನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



