ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಮೃತಪಟ್ಟಿದ್ದು, ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ಏಪ್ರಿಲ್ 10ರಂದು ಬೆಳಗ್ಗೆ ನಡೆದಿದೆ. ಪ್ರೀತಿ ಆಚಾರ್ಯ ಅಪಘಾತದಲ್ಲಿ ಮೃತಪಟ್ಟವರು.

ಬೆಳಗ್ಗೆ ಸುಮಾರು 11:30ರ ಸುಮಾರಿಗೆ ಕನ್ಯಾನ ಗ್ರಾಮದ ತಿಮ್ಮಪ್ಪ ನಾಯಕ್ (46) ಅವರು ಶಾಲೆ ಗೇಟ್ ಬಳಿ ನಿಂತಿದ್ದ ವೇಳೆ, ಉಡುಪಿ ಕಡೆಯಿಂದ ಬಂದ ಬಸ್ಸಿನಿಂದ ಇಳಿದ ಅರ್ಪಣಾ ಎಂಬ ವಿದ್ಯಾರ್ಥಿನಿ ಹಾಗೂ ಆಕೆಯ ಸಂಬಂಧಿ ಪ್ರೀತಿ ಆಚಾರ್ಯ ರಸ್ತೆ ದಾಟಲು ಮುಂದಾಗಿದ್ದರು. ಈ ವೇಳೆ ಉಡುಪಿ ಕಡೆಯಿಂದ ರಾಂಗ್ ಸೈಡ್‌ನಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಬಂದ ಮಿನಿ ಗೂಡ್ಸ್ ವಾಹನ, ಚಾಲಕ ನಾರಾಯಣಪ್ಪನ ನಿಯಂತ್ರಣ ತಪ್ಪಿ ಇಬ್ಬರಿಗೂ ಡಿಕ್ಕಿ ಹೊಡೆದಿದೆ.

ಅಪಘಾತದ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದು ತಲೆ ಹಾಗೂ ಕಾಲು ಭಾಗಗಳಿಗೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೀತಿ ಆಚಾರ್ಯ ಮೃತಪಟ್ಟಿದ್ದಾರೆ. ಅರ್ಪಣಾ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪ್ರತ್ಯಕ್ಷದರ್ಶಿ ಕನ್ಯಾನ ಗ್ರಾಮದ ತಿಮ್ಮಪ್ಪ ನಾಯಕ್ ನೀಡಿದ ದೂರಿನ ಪ್ರಕಾರ, ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



