ಉಡುಪಿ: ಉಡುಪಿ ನಗರದ ನಿಟ್ಟೂರು ಕೆಎಸ್ಆರ್ಟಿಸಿ ಡಿಪ್ಪೋ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಕ್ಟೋಬರ್ 26ರ ರಾತ್ರಿ ಕಾರೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬರು ಮೃತಪಟ್ಟ ದುರ್ಘಟನೆ ನಡೆದಿದೆ.

ಮೃತ ಯುವತಿ ಶಿರ್ವ ಪೊಲೀಸ್ ಠಾಣೆಯ ಎಎಸ್ಐ ಸುದೇಶ್ ಶೆಟ್ಟಿ ಅವರ ಪುತ್ರಿ ಸ್ಪರ್ಷ (24) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಅವರ ತಾಯಿ ಶರ್ಮಿಳಾ (49) ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವೇಳೆ ಕರಾವಳಿ ಬೈಪಾಸ್ ದಿಕ್ಕಿನಿಂದ ಸಂತೆಕಟ್ಟೆ ಕಡೆಗೆ ಸಾಗುತ್ತಿದ್ದ ಕಾರು ಹಿಂದಿನಿಂದ ಸ್ಕೂಟರ್ಗೆ ಬಲವಾಗಿ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ತಾಯಿ–ಮಗಳು ಇಬ್ಬರೂ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡ ಸ್ಪರ್ಷ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗಿದೆ.


