ಉಡುಪಿ: ಯಕ್ಷಗಾನ ನಮ್ಮ ಹಿರಿಯರು ಕೊಟ್ಟ ಸರ್ವಾಂಗ ಸುಂದರ ಕಲಾಪ್ರಕಾರ. ಇದು ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ, ಪುರಾಣ ಜ್ಞಾನ, ಆತ್ಮಸ್ಥೈರ್ಯ ಬೆಳೆಸುವುದರ ಜೊತೆಗೆ ಸಂಸ್ಕಾರವಂತರನ್ನಾಗಿಸುತ್ತದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ. ಅವರು ಹಿರಿಯಡಕದಲ್ಲಿ ನಡೆದ ಕಾಪು ಕ್ಷೇತ್ರದ ನಾಲ್ಕು ಶಾಲೆಗಳ ಯಕ್ಷಗಾನ ಪ್ರದರ್ಶನಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಉಡುಪಿ ಯಕ್ಷಶಿಕ್ಷಣ ಟ್ರಸ್ಟ್, ಶ್ರೀ ವೀರಭದ್ರ ದೇವಸ್ಥಾನ ಹಿರಿಯಡಕ, ಪ್ರದರ್ಶನ ಸಂಘಟನಾ ಸಮಿತಿ ಹಿರಿಯಡಕ ಮತ್ತು ಯಕ್ಷಗಾನ ಕಲಾರಂಗ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸೆಲ್ಕೋ ಸೋಲಾರ್ ಲೈಟ್ ಪ್ರೈ.ಲಿ.ನ ಗುರುಪ್ರಕಾಶ್ ಶೆಟ್ಟಿ, ಉದ್ಯಮಿ ಶ್ರೀನಿವಾಸ್ ರಾವ್, ಹಿರಿಯಡಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್, ಮಣಿಪುರ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ರೂಪರೇಖಾ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿದ್ದರು. ಟ್ರಸ್ಟಿ ವಿ.ಜಿ. ಶೆಟ್ಟಿ ಸ್ವಾಗತಿಸಿದರು. ನಾರಾಯಣ ಎಂ. ಹೆಗ್ಡೆ ಮತ್ತು ಡಾ. ರಾಜೇಶ್ ನಾವಡ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ಸಭೆಯ ಪೂರ್ವದಲ್ಲಿ ಮಣಿಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಕೃಷ್ಣಾರ್ಜುನ ಕಾಳಗ, ನಂತರ ಹಿರಿಯಡಕ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗಳು ಮನ್ಸೆಳೆಯಿತು.



