ಉಡುಪಿ: ಯಕ್ಷಗಾನ ಕಲಾರಂಗ ಸಂಸ್ಥೆಯ 81ನೇ ಮನೆ ಜಾನಕೀರಾಮವನ್ನು ಕಾಪು ತಾಲೂಕಿನ ಕುಂತಳನಗರದಲ್ಲಿ ಯಕ್ಷಗಾನ ಕಲಾರಂಗ ವಿದ್ಯಾಪೋಷಕ ಯೋಜನೆಯಡಿ ಪಠ್ಯವ್ಯಾಸಂಗ ಮಾಡುತ್ತಿರುವ ಪ್ರಥಮ ಪಿಯುಸಿ ವಿದ್ಯಾರ್ಥಿ ದಿಶಾನ್ ಅವರಿಗೆ ಹಸ್ತಾಂತರ ಮಾಡಲಾಯಿತು.

ಉಡುಪಿಯ ಡಾ. ರಾಜೇಶ್ವರೀ ಜಿ. ಭಟ್ ಅವರು ತಮ್ಮ ತೀರ್ಥರೂಪರಾದ ಕೆ. ರಾಮಕೃಷ್ಣ ರಾವ್ ಅವರ ಸ್ಮರಣಾರ್ಥ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಗೃಹವನ್ನು ಜಾನಕಿ ಕೆ.ಆರ್. ರಾವ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರಾಜೇಶ್ವರೀ ಜಿ. ಭಟ್, ತಮ್ಮ ಬದುಕನ್ನು ರೂಪಿಸಲು ತಂದೆಯ ವ್ಯಕ್ತಿತ್ವ ಹಾಗೂ ತಾಯಿಯ ಪರಿಶ್ರಮ ಮಹತ್ವದ ಪಾತ್ರ ವಹಿಸಿತು ಎಂದು ನುಡಿದರು. ಕಲಾರಂಗದ ನಾಯಕತ್ವ, ಪಾರದರ್ಶಕ ಕಾರ್ಯವೈಖರಿ ಮತ್ತು ಕಾರ್ಯಕರ್ತರ ಅರ್ಪಣಾಭಾವ ಮನಸಿಗೆ ಸ್ಪರ್ಶಿಸಿದೆ ಎಂದರು. ಡಾ. ಗುರುಮೂರ್ತಿ ಮಾತನಾಡಿ ಕಲಾರಂಗದ ಸಮಾಜಮುಖಿ ಕೆಲಸವು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಯು.ಎಸ್. ರಾಜಗೋಪಾಲ ಆಚಾರ್ಯ ಅವರು ಡಾ. ರಾಜೇಶ್ವರಿಯವರ ಪೋಷಕರ ಉದಾರ ವ್ಯಕ್ತಿತ್ವವನ್ನು ಸ್ಮರಿಸಿದರು. ಡಾ. ಕೆ.ಆರ್. ಗುರುಪ್ರಸಾದ್ ಅವರು ಕಲಾರಂಗದ ಸೇವಾ ಚಟುವಟಿಕೆಗಳು ಸಮಾಜಕ್ಕೆ ಮಾದರಿ ಎಂದು ಕೊಂಡಾಡಿದರು. ಅಧ್ಯಕ್ಷತೆ ವಹಿಸಿದ ಕಾಪು ಶಾಸಕರು ಗುರ್ಮೆ ಸುರೇಶ್ ಶೆಟ್ಟಿ, ಕಲಾರಂಗದಂತಹ ಸಂಸ್ಥೆಗಳು ಪ್ರತಿಯೊಂದು ಊರಲ್ಲಿದ್ದರೆ ರಾಮರಾಜ್ಯದ ಕನಸು ಸಾಕಾರಗೊಳ್ಳುವುದು ಸುಲಭ ಎಂದರು.

ಕಾರ್ಯಕ್ರಮದಲ್ಲಿ ಶಕುಂತಲಾ ಭಟ್, ಕಾರ್ತಿಕ್ ಭಟ್, ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಜತೆಕಾರ್ಯದರ್ಶಿ ವಿದ್ಯಾಪ್ರಸಾದ್, ಸದಸ್ಯರು ಭುವನ ಪ್ರಸಾದ್ ಹೆಗ್ಡೆ, ಎ. ಅನಂತರಾಜ ಉಪಾಧ್ಯ, ಮಂಜುನಾಥ ಹೆಬ್ಬಾರ್, ಕಿಶೋರ್ ಸಿ. ಉದ್ಯಾವರ, ಡಾ. ರಾಜೇಶ್ ನಾವಡ, ಎ. ಅಜಿತ್ ಕುಮಾರ್, ಪ್ರಭಾಕರ ಬಂಡಿ ಮತ್ತಿತರರು ಉಪಸ್ಥಿತರಿದ್ದರು. ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗ್ಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆ ಮಾಡಿದರು. ಜ್ಞಾನಗಂಗಾ ಉಪನ್ಯಾಸಕಿ ದಿವ್ಯಾ ಭಟ್ ಪ್ರಾರ್ಥನೆ ಸಲ್ಲಿಸಿದರು.



