ಉಡುಪಿ: ಯಕ್ಷಗಾನ ಕಲಾರಂಗ ವಿದ್ಯಾಪೋಷಕ ಯೋಜನೆಯ ಫಲಾನುಭವಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷಿತಾ ನಾಯ್ಕ್ ಅವರಿಗೆ ಹಿರಿಯಡಕದ ಬೊಮ್ಮರಬೆಟ್ಟುವಿನಲ್ಲಿ ನಿರ್ಮಿಸಲಾಗಿರುವ ಸಂಸ್ಥೆಯ 105ನೇ ನೂತನ ಮನೆ ‘ರಂಗರುಕ್ಮಿಣಿ’ಯನ್ನು ಅಕ್ಟೋಬರ್ 5ರಂದು ಹಸ್ತಾಂತರಿಸಲಾಯಿತು.

ಉಡುಪಿ ಗಾಂಧಿ ಆಸ್ಪತ್ರೆಯ ಸಂಸ್ಥಾಪಕರಾದ ಡಾ. ಹರಿಶ್ಚಂದ್ರ ಅವರು ತಮ್ಮ ತಂದೆ-ತಾಯಿಯ ಸ್ಮರಣಾರ್ಥ ನಿರ್ಮಿಸಿರುವ ನೂತನ ಮನೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಶ್ರೀಮತಿ ಗೀತಾ ಹಾಗೂ ಉದಯ ನಾಯ್ಕ್ ದಂಪತಿಯ ಪುತ್ರಿಯಾಗಿರುವ ಅಕ್ಷಿತಾ ನಾಯ್ಕ್ ಅವರು ಯಕ್ಷಗಾನ ಕಲಾರಂಗದ ವಿದ್ಯಾಪೋಷಕ ಯೋಜನೆಯ ಫಲಾನುಭವಿಯಾಗಿದ್ದಾರೆ.

ಮನೆ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದ ಡಾ. ಹರಿಶ್ಚಂದ್ರ, ಇಂದು ನನ್ನ ಹುಟ್ಟುಹಬ್ಬ. ನಾನು ಮತ್ತು ಲಕ್ಷ್ಮೀ ಅವರ ವಿವಾಹದ ಶುಭದಿನವೂ ಹೌದು. ಇದರೊಂದಿಗೆ ನನ್ನ ತಂದೆಯ 105ನೇ ಜನ್ಮವರ್ಷದ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ 105ನೇ ಮನೆ ನಿರ್ಮಾಣಕ್ಕೆ ಪ್ರಾಯೋಜಕತ್ವ ವಹಿಸಿರುವುದು ನನ್ನ ಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು. ಇದು ನನ್ನ 60ನೇ ವರ್ಷ. ಈ ವರ್ಷ ಯಕ್ಷಗಾನ ಕಲಾರಂಗ ನಿರ್ಮಿಸುವ ಪ್ರತಿಯೊಂದು ಮನೆಯ ವೆಚ್ಚವನ್ನು ಭರಿಸುವ ಅವಕಾಶ ನನಗೆ ದೊರೆಯಬೇಕು ಎಂಬ ಆಸೆಯನ್ನು ಸಂಸ್ಥೆಯ ಮುಂದಿಟ್ಟಿದ್ದೆ. ಗಳಿಸಿದ ಸಂಪತ್ತನ್ನು ಕೇವಲ ಸಂಗ್ರಹಿಸಿಟ್ಟುಕೊಳ್ಳುವುದಕ್ಕಿಂತ ಸತ್ಕಾರ್ಯಕ್ಕೆ ವಿನಿಯೋಗಿಸಿದಾಗ ಬದುಕಿಗೊಂದು ಸಾರ್ಥಕತೆ ದೊರೆಯುತ್ತದೆ ಎಂದು ಅವರು ಹೇಳಿದರು.

ಸಮಾಜಮುಖಿ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಡಾ. ಹರಿಶ್ಚಂದ್ರ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಪಿ. ನಟರಾಜ ಹೆಗ್ಡೆ ಅಭಿಪ್ರಾಯಪಟ್ಟರು. ಫಲಾನುಭವಿಗಳ ಆಯ್ಕೆಯಲ್ಲಿ ಯಕ್ಷಗಾನ ಕಲಾರಂಗ ತೋರುತ್ತಿರುವ ಮಾನವೀಯ ಕಾಳಜಿ ಮತ್ತು ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಗಳಿಸಿದ ಹಣವನ್ನು ಕೇವಲ ತಮ್ಮ ಸ್ವಾರ್ಥಕ್ಕೆ ಬಳಸದೆ ಸಮಾಜದ ಒಳಿತಿಗಾಗಿ ವಿನಿಯೋಗಿಸಿದಾಗ ಬದುಕು ಸಾರ್ಥಕವಾಗುತ್ತದೆ. ಡಾ. ಹರಿಶ್ಚಂದ್ರ ಅವರು ನಿರಂತರವಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯಡಕ ಕೆಪಿಎಸ್ನ ಎಸ್ಡಿಎಂಸಿ ಉಪಾಧ್ಯಕ್ಷ ಬಿ.ಎಲ್. ವಿಶ್ವಾಸ್ ಹಾಗೂ ಶ್ರೀಮತಿ ಲಕ್ಷ್ಮೀ ಹರಿಶ್ಚಂದ್ರ ಅವರು ಅಕ್ಷಿತಾ ನಾಯ್ಕ್ ಅವರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಡಾ. ಪಂಚಮಿ, ಎಂ. ದಾಮೋದರ ಭಟ್, ಎಂ. ಅನಂತ ಭಟ್, ಜಯಲಕ್ಷ್ಮೀ ತಂತ್ರಿ, ಶಕುಂತಳಾ ಇಟಾಳ್, ಜಾಹ್ನವಿ ಭಟ್, ರಾಜೇಶ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿವಾಹದ ಶುಭದಿನದ ಸಂದರ್ಭದಲ್ಲೇ ಡಾ. ಹರಿಶ್ಚಂದ್ರ ದಂಪತಿಯನ್ನು ಯಕ್ಷಗಾನ ಕಲಾರಂಗದ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಪಿ. ಕಿಶನ್ ಹೆಗ್ಡೆ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ್ ಹೆಗ್ಡೆ, ಯು. ಅನಂತರಾಜ ಉಪಾಧ್ಯ, ಮರ್ಣೆ ಉಮೇಶ್ ಭಟ್, ರಾಜೇಶ್ ಭಟ್ ಪಣಿಯಾಡಿ, ಆರ್. ವಸಂತ, ಡಾ. ಪ್ರತಿಮಾ ಆಚಾರ್ಯ, ಶಾಲಾ ಆಡಳಿತ ಸಮಿತಿ ಸದಸ್ಯ ಅಶೋಕ್ ಜೋಗಿ, ಮುಖ್ಯೋಪಾಧ್ಯಾಯ ಪ್ರಕಾಶ್ ಪ್ರಭು, ನರಸಿಂಹಮೂರ್ತಿ ರಾವ್, ನಾಗಭೂಷಣ ಭಟ್, ಜನಾರ್ದನ ಕೊಡವೂರು ಮತ್ತಿತರರು ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗ್ಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.


