ಕೋಟ: ಮೀನುಗಾರಿಕೆಗೆ ತೆರಳಿದ ಬೋಟ್ ಒಂದು ತಾಂತ್ರಿಕ ಸಮಸ್ಯೆಯಿಂದಾಗಿ ದಡಕ್ಕೆ ಅಪ್ಪಳಿಸಿ ಹಾನಿಗೊಳಗಾದ ಘಟನೆ ಹಂಗಾರಕಟ್ಟೆ ಸಮೀಪ ನಡೆದಿದೆ. ಕೋಡಿ ಬೆಂಗ್ರೆ ಮೂಲದ ಮಹೇಶ್ ಅವರ ಮಾಲಕತ್ವದ ಮಹಾಕಾಳಿ ಹೆಸರಿನ ಬೋಟ್ ಇದಾಗಿದೆ.

ಸೆಪ್ಟೆಂಬರ್ ೧೭ರಂದು ಬೆಳಿಗ್ಗೆ ಕೋಡಿ ಬೆಂಗ್ರೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಅಪರಾಹ್ನದ ವೇಳೆ ಹಂಗಾರಕಟ್ಟೆ ಮೀನುಗಾರಿಕಾ ಬಂದರು ಬಳಿ ಮೀನುಗಾರಿಕೆ ಮಾಡುತ್ತಿರುವಾಗ ಬೋಟ್ ತಾಂತ್ರಿಕ ದೋಷಕ್ಕೆ ತುತ್ತಾಗಿತ್ತು. ಬೋಟ್ ಇಂಜಿನ್ ಬಂದ್ ಆಗಿ ಎಷ್ಟೆ ಪ್ರಯತ್ನಿಸಿದರೂ ಇಂಜಿನ್ ಮತ್ತೆ ಚಾಲನೆಯಾಗದ ಹಿನ್ನಲೆಯಲ್ಲಿ ಬೋಟ್ ಮುಂದೆ ಚಲಾಯಿಸಲು ಸಾಧ್ಯವಾಗಿಲ್ಲ.

ಇಂಜಿನ್ ಬಂದ್ ಆಗಿ ನಿಂತಿದ್ದ ಬೋಟ್, ಗಾಳಿ ಮತ್ತು ಅಲೆಗಳ ರಭಸಕ್ಕೆ ಸಮುದ್ರ ತೀರಕ್ಕೆ ಬಂದ ಬೋಟ್ ಕೋಡಿ ಕನ್ಯಾನ ಬಳಿ ದಡಕ್ಕೆ ಅಪ್ಪಳಿಸಿದೆ. ಈ ವೇಳೆ ಬೋಟ್‌ನಲ್ಲಿದ್ದ ಐವರು ಅಪಾಯದಿಂದ ಪಾರಾಗಿದ್ದು, ಬೋಟ್ ಮತ್ತು ಇನ್ನಿತರ ಸಾಮಗ್ರಿಗಳ ಹಾಳಾಗಿ ಸುಮಾರು 10 ಲಕ್ಷ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.