ಉಡುಪಿ : ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಡಿಸ್ಕೋ ನಾಡದೋಣಿಗೆ ಜುಲೈ 11 ರ ಶುಕ್ರವಾರ ಸೈಂಟ್ ಮೇರೀಸ್ ದ್ವೀಪದಿಂದ ಸುಮಾರು 1 ಕಿ.ಮೀ.ದೂರದಲ್ಲಿ ಬೃಹತ್ ತೆರೆಯೊಂದು ದೋಣಿಗೆ ಬಡಿದ ಪರಿಣಾಮ ದೋಣಿ ಮಗುಚಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟ ಉಡುಪಿ ಪಿತ್ರೋಡಿಯ ಮೃತ ನೀಲಾಧರ ಜಿ ತಿಂಗಳಾಯ ರವರ ಮನೆಗೆ ಮೀನುಗಾರಿಕಾ ಸಚಿವ ಮಂಕಾಳ ಎಸ್ ವೈದ್ಯ ರವರು ಭೇಟಿ ನೀಡಿ, ಸಾಂತ್ವನ ಹೇಳಿ, ಪರಿಹಾರದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀನುಹಿಡಿಯುವ ಸಂದರ್ಭದಲ್ಲಿ ಅಕಸ್ಮಾತ್ ಆಗಿ ಕಾಲು ಜಾರಿ ಸಮುದ್ರದಲ್ಲಿ ಬಿದ್ದು, ಅಸ್ವಸ್ಥರಾಗಿದ್ದ ನೀಲಾಧರ ಜಿ ತಿಂಗಳಾಯ ಅವರನ್ನು ತತ್ಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಸಹ ಉಳಿಸಿಕೊಳ್ಳಲಾಗಲಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೃತ ಕುಟುಂಬದ ಮನೆಗೆ ಭೇಟಿ ನೀಡಿ ಅಗತ್ಯ ಸಹಕಾರ ನೀಡಿದ್ದಾರೆ. ಭಟ್ಕಳ, ಮುರ್ಡೇಶ್ವರ ಸೇರಿದಂತೆ ಉಡುಪಿಯಲ್ಲಿಯೂ ಸಹ ಇಂತಹ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿರುವುದು ಅತೀವ ನೋವು ತಂದಿದೆ ಎಂದ ಅವರು, ಮೃತ ಮೀನುಗಾರರ ಕುಟುಂಬಕ್ಕೆ ಸರಕಾರದ ವತಿಯಿಂದ ಎಲ್ಲಾ ರೀತಿಯ ಸಹಾಯ ನೀಡಲಾಗುವುದು, ಸಮುದ್ರ ಪ್ರಕ್ಷಬ್ಧವಾಗಿರುವುದರಿಂದ ಕರಾವಳಿ ಭಾಗದ ಮೀನುಗಾರರು ಮೀನು ಹಿಡಿಯಲು ಸಮುದ್ರಕ್ಕೆ ಇಳಿಯದಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಯಶ್ ಪಾಲ್ ಎಸ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗ್ಯಾರಂಟಿ ಯೋಜನ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
6 ಲಕ್ಷ ರೂ. ಇದ್ದ ಪರಿಹಾರದ ಹಣವನ್ನು ವಿಶ್ವ ಮೀನುಗಾರಿಕೆ ದಿನದಂದು 10 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಇಂದು ಪರಿಹಾರದ ಹಣವನ್ನು ಕುಟುಂಬದವರಿಗೆ ವಿತರಿಸಿದ್ದೇವೆ ಹಾಗೂ ಪ್ರಪ್ರಥಮಬಾರಿಗೆ ದೋಣಿ, ಇಂಜಿನ್, ಬಲೆಯ ಖರೀದಿಗೆ ಸಹ 5 ಲಕ್ಷ ರೂ. ನೀಡಲಾಗಿದೆ. ಕರಾವಳಿ ಭಾಗದಲ್ಲಿ ಇಂತಹ ದುರಂತ ಮತ್ತೆ ಮರುಕಳಿಸದಂತೆ ಮೀನುಗಾರರು ಎಚ್ಚರಿಕೆಯಿಂದ ಇರಬೇಕು. ಕಾಲಕಾಲಕ್ಕೆ ಹವಾಮಾನ ಇಲಾಖೆಯಿಂದ ನೀಡಲಾಗುವ ಮುನ್ಸೂಚನೆಗಳನ್ನು ಪಾಲಿಸಬೇಕು.
ಮಂಕಾಳ ಎಸ್ ವೈದ್ಯ (ಮೀನುಗಾರಿಕಾ ಸಚಿವ )