ಬೆಂಗಳೂರು : ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗವನ್ನು ಮತ್ತು ದುರ್ಬಲಗೊಳಿಸುವ ಪ್ರಯತ್ನವನ್ನು ತಪ್ಪಿಸಿ, ಸರ್ಕಾರದ ಸಾಮಾಜಿಕ ನ್ಯಾಯದ ಗುರಿಯನ್ನು ಈಡೇರಿಸಿ ಎಂದು ನೂತನವಾಗಿ ನೇಮಕಗೊಂಡ ಮಾಹಿತಿ ಹಕ್ಕು ಆಯುಕ್ತರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು. ಅವರು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಹಿತಿ ಆಯುಕ್ತರಾಗಿ ನೇಮಕಗೊಂಡ ಪತ್ರಕರ್ತರು ಮತ್ತು ಚಲನಚಿತ್ರ ಅಕಾಡೆಮಿ ಸದಸ್ಯರಾದ ಪತ್ರಕರ್ತರನ್ನು ಅಭಿನಂದಿಸಿ, ಸನ್ಮಾನಿಸಿ ಮಾತನಾಡಿದರು.

ರಾಜ್ಯ ಸರ್ಕಾರಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಂದಿ ಪತ್ರಕರ್ತರು ಮಾಹಿತಿ ಆಯೋಗದ ಆಯುಕ್ತರುಗಳಾಗಿದ್ದಾರೆ ಮತ್ತು ಚಲನಚಿತ್ರ ಅಕಾಡೆಮಿ ಸದಸ್ಯರುಗಳಾಗಿದ್ದಾರೆ. ನಿಮ್ಮೆಲ್ಲರ ಮೇಲೆ ಸರ್ಕಾರದ ಮತ್ತು ಸಾಮಾಜಿಕ ನ್ಯಾಯದ ಜವಾಬ್ದಾರಿಗಳಿವೆ. ಈ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತೀರಿ ಎನ್ನುವ ಭರವಸೆ ವ್ಯಕ್ತಪಡಿಸಿದರು.
ಕಾಯ್ದೆಯನ್ನು ವ್ಯಾಪಕವಾಗಿ ದುರುಪಯೋಗ ಪಡಿಸಿಕೊಳ್ಳುವವರ, ಬ್ಲಾಕ್ ಲೀಸ್ಟ್ ಗೆ ಸೇರುವ ಮಾಹಿತಿ ಹಕ್ಕು ಕಾರ್ಯಕರ್ತರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಮತ್ತೊಂದು ಕಡೆ RTI ಕಾರ್ಯಕರ್ತರ ಕೊಲೆ ಪ್ರಕರಣಗಳೂ ಮೇಲಿಂದ ಮೇಲೆ ವರದಿ ಆಗುತ್ತಲೇ ಇವೆ. ವಿಳಂಬಿತ ನ್ಯಾಯವೂ ನ್ಯಾಯದ ನಿರಾಕರಣೆಯೇ ಎನ್ನುತ್ತದೆ ನ್ಯಾಯಶಾಸ್ತ್ರ. ಪರಿಣಾಮಕಾರಿಯಾದ ಕಾನೂನೊಂದರ ಸುಗಮ ಅನುಷ್ಠಾನಕ್ಕೆ ಹಿಂಬಾಗಿಲ ಅಡ್ಡಿಗಳನ್ನು ಒಡ್ಡುವ ಮೂಲಕ, ಆ ಕಾನೂನನ್ನು ಕೆಲಸಕ್ಕೆ ಬಾರದಂತೆ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ. ಈ ಸವಾಲುಗಳನ್ನೂ ನೂತನ ಆಯುಕ್ತರಾದ ಪತ್ರಕರ್ತರು ನಿರ್ವಹಿರಿಸಬೇಕು ಎಂದು ಕರೆ ನೀಡಿದರು. ಮಾಹಿತಿ ಆಯುಕ್ತರಾಗಿ ನೇಮಕಗೊಂಡಿರುವ ನನ್ನ ಎಲ್ಲಾ ಸ್ನೇಹಿತರೂ ತಮ್ಮ ಪಾಲಿಗೆ ಒದಗಿ ಬಂದಿರುವ ಈ ಅವಕಾಶದಲ್ಲಿ ಕಾಯ್ದೆಯ ಗುರಿ ಮತ್ತು ಉದ್ದೇಶಗಳನ್ನು ರಕ್ಷಿಸುತ್ತಾರೆ ಎನ್ನುವ ಭರವಸೆ ನನಗಿದೆ.
2013-2018 ರ ವರೆಗೆ ಭ್ರಷ್ಟಾಚಾರ ರಹಿತ ಆಡಳಿತದ ಮಾದರಿ ಮುಖ್ಯಮಂತ್ರಿ. ಮಾದರಿ ಸರ್ಕಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬಹಳ ನಿರೀಕ್ಷೆಗಳ ಜೊತೆಗೆ ನಿಮ್ಮನ್ನು ನೇಮಕ ಮಾಡಿದೆ. ಅವರ ನಿರೀಕ್ಷೆ ಸುಳ್ಳಾಗದ ರೀತಿಯಲ್ಲಿ ನಿಮ್ಮಗಳ ಕಾರ್ಯಕ್ಷಮತೆ ಮೆಚ್ಚುಗೆಗೆ ಪಾತ್ರವಾಗಲಿ ಎಂದು ಆಶಿಸಿದರು. ನೂತನ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ಬದ್ರುದ್ದೀನ್, ಮಮತಾಗೌಡ, ರಾಜಶೇಖರ್, ಮಮತಾಗೌಡ ಚಲನಚಿತ್ರ ಅಕಾಡೆಮಿ ಸದಸ್ಯರಾದ ದೇಶಾದ್ರಿ ಹೊಸ್ಮನೆ, ಚಿದಾನಂದ ಪಾಟೀಲ್ ಅವರು ಸನ್ಮಾನಿಸಲಾಯಿತು. ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಜಂಟಿ ನಿರ್ದೇಶಕರಾದ ಎಚ್.ಬಿ.ದಿನೇಶ್, KUWJ ಅಧ್ಯಕ್ಷ ಶಿವಾನಂದ ತಗಡೂರು, ಖಜಾಂಚಿ ವಾಸುದೇವ ಹೊಳ್ಳ ಅವರು ಉಪಸ್ಥಿತರಿದ್ದರು.