ಉಡುಪಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಪರಿಚಿತ ವೃದ್ಧರೊಬ್ಬರು ಖಾಸಗಿ ವ್ಯಕ್ತಿಗೆ ಸೇರಿದ್ದ ಸ್ಥಳದಲ್ಲಿದ್ದ ಗಿಡಗಂಟಿಗಳಿಗೆ ಬೆಂಕಿ ಹಚ್ಚಿದ ಘಟನೆ ನಗರದ ಬೈಲಕೆರೆ ಗೋವಿಂದ ಪುಷ್ಕರಣಿ ರಸ್ತೆ ಸಮೀಪ ನಡೆದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಆತಂಕಗೊಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ, ದೊಡ್ಡ ಪ್ರಮಾಣದ ಅಗ್ನಿದುರಂತ ಸಂಭವಿಸುವುದನ್ನು ಸಮಯೋಚಿತವಾಗಿ ತಡೆದಿದ್ದಾರೆ. ಅವರ ವೇಗವಾದ ಕಾರ್ಯಾಚರಣೆಯಿಂದ ಸುತ್ತಮುತ್ತಲಿನ ಪ್ರದೇಶಕ್ಕೆ ಯಾವುದೇ ಹಾನಿಯಾಗದಂತೆ ರಕ್ಷಣೆ ದೊರಕಿದೆ.

ಘಟನೆಯ ಮಾಹಿತಿ ತಿಳಿದ ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಪೊಲೀಸ್ ಸಹಕಾರದೊಂದಿಗೆ ವೃದ್ಧರನ್ನು ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದರು. ಮುಖ್ಯ ಆರಕ್ಷಕ ಹರೀಶ್ ಮಾಳ ಅವರು ವೃದ್ಧರ ವಿಳಾಸ ಹಾಗೂ ಕುಟುಂಬದ ವಿವರಗಳನ್ನು ಪತ್ತೆಹಚ್ಚಿ, ಸಂಬಂಧಿಕರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದು, ಬಳಿಕ ವೃದ್ಧರನ್ನು ಕುಟುಂಬಸ್ಥರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.



