ಉಡುಪಿ : ಎಂ.ಡಿ.ಎಂ.ಎ ಪೌಡರ್, ಎಂ.ಡಿ.ಎಂ.ಎ ಟ್ಯಾಬ್ಲೆಟ್, ಹೈಡ್ರೋಗಾಂಜಾ ಹಾಗೂ ಗಾಂಜಾವನ್ನು ವಿವಿಧೆಡೆ ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ಉಡುಪಿ ಪೊಲೀಸರು, ಸುಮಾರು ರೂ 3.31 ಲಕ್ಷ ಮೌಲ್ಯದ ಮಾದಕ ವಸ್ತುಗಳು ಹಾಗೂ ಕಾರು ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಅವರ ಮಾರ್ಗದರ್ಶನ ಹಾಗೂ ಮಲ್ಪೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ನೇತೃತ್ವದಲ್ಲಿ, ಉಡುಪಿ ಸಂಚಾರ ಠಾಣೆಯ ಪಿಎಸ್ಐ ಮಹೇಶ್ ಟಿ.ಎಂ. ಮತ್ತು ವಿಶೇಷ ಪೊಲೀಸ್ ತಂಡವು ಶಿವಳ್ಳಿ ಗ್ರಾಮದ ಬುಡ್ನಾರ್ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಿಜಯ ಪೂಜಾರಿ (36), ಪಿತ್ರೋಡಿ-ಉದ್ಯಾವರ, ಪಿ.ಎ. ಮೊಹಮ್ಮದ್ ಸಮ್ಮಾಸ್ (24), ಕುಕ್ಕಂದೂರು ಹಾಗೂ ಆಕಾಶ್ ಶೆಟ್ಟಿ (20), ಮಿಯಾರು (ಕಾರ್ಕಳ) ನಿವಾಸಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಕಾಪು, ಉಡುಪಿ, ಮಣಿಪಾಲ ಹಾಗೂ ಕಾರ್ಕಳ ಭಾಗಗಳಲ್ಲಿ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದು, ಬಂಧಿತರಿಂದ 4 ಗ್ರಾಂ ಎಂ.ಡಿ.ಎಂ.ಎ ಪೌಡರ್, 2.5 ಗ್ರಾಂ ಹೈಡ್ರೋಗಾಂಜಾ, 3.65 ಗ್ರಾಂ ಎಂ.ಡಿ.ಎಂ.ಎ ಟ್ಯಾಬ್ಲೆಟ್, 3 ಗ್ರಾಂ ಗಾಂಜಾ, ಮಾದಕ ವಸ್ತು ಸಾಗಾಟಕ್ಕೆ ಬಳಸಿದ್ದ ಒಂದು ಕಾರು ಸೇರಿದಂತೆ ಒಟ್ಟು ರೂ 3,31,500 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆ, ಹಿರಿಯಡ್ಕ ಪೊಲೀಸ್ ಠಾಣೆ, ಮಲ್ಪೆ ವೃತ್ತ ಕಚೇರಿ ಹಾಗೂ ಉಡುಪಿ ಸಂಚಾರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ತಂಡ ಭಾಗವಹಿಸಿತ್ತು.


