ಉಡುಪಿ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವಾರ್ಷಿಕ ವರ್ಧಂತಿಯ ಪ್ರಯುಕ್ತ ಮಾರ್ಚ್ 1ರಿಂದ 3ರವರೆಗೆ ಕಾಪುವಿನ ಅಮ್ಮನ ಸನ್ನಿಧಾನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ‘ಮಾತೃ ವೈಭವ’ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಶ್ರೀಮಾತಾ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಭಕ್ತರ ಸಹಕಾರದೊಂದಿಗೆ ವಾರ್ಷಿಕ ಉತ್ಸವವನ್ನು ವೈಭವದಿಂದ ನಡೆಸುವ ಉದ್ದೇಶದಿಂದ ಮಾತೃ ವೈಭವ ಉತ್ಸವ ಸಮಿತಿ ರಚಿಸುವ ಅಭಿಲಾಷೆಯನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

ಸಭೆಯ ಪ್ರಸ್ತಾವನೆಗೈದ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ದೇಶ-ವಿದೇಶಗಳಲ್ಲಿ ನೆಲೆಸಿರುವ ಭಕ್ತರು ಹಾಗೂ ಕಾಪುವಿನ ಅಮ್ಮನ ಮಕ್ಕಳ ಸಹಕಾರದಿಂದ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಪ್ರತೀ ವರ್ಷ ಮಾರ್ಚ್ 1, 2 ಮತ್ತು 3ರಂದು ಪ್ರತಿಷ್ಠಾ ವರ್ಧಂತಿಯನ್ನು ಒಗ್ಗಟ್ಟಿನಿಂದ ಆಚರಿಸುವ ಮೂಲಕ ಮಾತೃ ವೈಭವವನ್ನು ಕಾಪುವಿನ ಪ್ರಮುಖ ಉತ್ಸವವನ್ನಾಗಿ ರೂಪಿಸಬೇಕೆಂದು ಹೇಳಿದರು.ಸಮಿತಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಮಾರಿಗುಡಿಯ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಪ್ರತಿಷ್ಠಾ ವರ್ಧಂತಿಯನ್ನು ಕಾಪುವಿಗೆ ವಿಶೇಷ ಗುರುತನ್ನು ತರುವ ಉತ್ಸವವನ್ನಾಗಿ ಆಯೋಜಿಸಬೇಕು. ಇದು ಅವಿಭಜಿತ ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಗೆ ಮಾದರಿಯಾಗಬೇಕು ಎಂದರು. ಸಭೆಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಲಾಲಾಜಿ ಆರ್. ಮೆಂಡನ್, ಅನಿಲ್ ಬಲ್ಲಾಳ್ ಕಾಪು ಬೀಡು, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಎಸ್. ಶೆಟ್ಟಿ, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕ್ರಂ ಕಾಪು, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಸೇರಿದಂತೆ ವ್ಯವಸ್ಥಾಪನಾ ಹಾಗೂ ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್ ಸ್ವಾಗತಿಸಿದರು. ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.



