ಉಡುಪಿ : ರೆಸಾರ್ಟ್ನಲ್ಲಿ ತಂಗಿದ್ದ ಬೆಂಗಳೂರಿನ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಲ್ಪೆ ಪಡುಕೆರೆಯಲ್ಲಿ ನಡೆದಿದೆ. ಮೃತರನ್ನು ಬೆಂಗಳೂರಿನ ಎಲ್. ಜಾಕ್ಸನ್ ಅವರ ಪತ್ನಿ ಲೆನ್ಸಿ ಮೇರಿ ಯಾನೆ ಸೂರ್ಯ (36) ಎಂದು ಗುರುತಿಸಲಾಗಿದೆ. ಇವರು ಫೆ.26ರಂದು ಇತರ ಒಂಬತ್ತು ಮಂದಿಯೊಂದಿಗೆ ಬೆಂಗಳೂರಿನಿಂದ ಹೊರಟು ಪಡುಕೆರೆಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಫೆ.27ರಂದು ಮಲ್ಪೆ ಬೀಚ್ನಲ್ಲಿ ಸುತ್ತಾಡಿ ಬಂದು ರಾತ್ರಿ ಮಲಗಿದ್ದರು ಎಂದು ತಿಳಿದುಬಂದಿದೆ.

ಫೆ.28ರಂದು ಬೆಳಗ್ಗೆ ಸುಮಾರು 8.30ಕ್ಕೆ ಲೆನ್ಸಿ ಮೇರಿಯನ್ನು ಎಬ್ಬಿಸಲು ಯತ್ನಿಸಿದಾಗ ಪ್ರತಿಕ್ರಿಯೆ ನೀಡದಿದ್ದ ಹಿನ್ನೆಲೆಯಲ್ಲಿ ತಕ್ಷಣವೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಪ್ರಾಥಮಿಕವಾಗಿ ಹೃದಯಾಘಾತದಿಂದ ಅಥವಾ ಅನಾರೋಗ್ಯದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆನಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



