ಉಡುಪಿ : ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಬಾರಕೂರು ನಿವಾಸಿ ಪ್ರವೀಣ್ ಕುಮಾರ್ ಕೆ ಬಂಧಿತ ಆರೋಪಿ.

ಹೇರಾಡಿ ಗ್ರಾಮದ ನಿವಾಸಿ ಯಂ. ಮಂಜುನಾಥ ರಾವ್ (77) ಅವರು ಮಾರ್ಚ್ 6ರಂದು ಸಂಜೆ ತಮ್ಮ ಮನೆಯನ್ನು ಬೀಗ ಹಾಕಿ ಬಾರಕೂರಿನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ, ಕಳ್ಳರು ಮನೆಯ ಮುಂಭಾಗದ ಬಾಗಿಲು ಒಡೆದು ಒಳನುಗ್ಗಿ, ಬೆಡ್ ರೂಮ್ನಲ್ಲಿದ್ದ ಗೋಡ್ರೇಜ್ ಲಾಕರ್ ಒಡೆದು ಚಿನ್ನಾಭರಣ ಹಾಗೂ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಕಳವಾದ ವಸ್ತುಗಳಲ್ಲಿ ಚಿನ್ನದ ಸರ-ಪೆಂಡೆಂಟ್, ಬಳೆಗಳು, ಉಂಗುರ, ಬೆಂಡೋಲೆಗಳು, ಬೆಳ್ಳಿಯ ವಸ್ತುಗಳು ಹಾಗೂ ರೂ.49,000 ನಗದು ಸೇರಿದ್ದು, ಒಟ್ಟು ಮೌಲ್ಯ ರೂ.14.67 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ತನಿಖೆ ನಡೆಸಿ, ಬಾರಕೂರು ನಿವಾಸಿ ಪ್ರವೀಣ್ ಕುಮಾರ್ ಕೆ ಅವರನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು ರೂ. 14 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 7,500 ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



