ಉಡುಪಿ : ಮದ್ಯಪಾನ ಮಾಡಿ ಅಜಾಗರೂಕತೆಯಿಂದ ಕಾರು ಚಲಾಯಿಸಿ ಸ್ಕೂಟಿಗೆ ಡಿಕ್ಕಿ ಹೊಡೆದು ಯುವಕನಿಗೆ ಗಂಭೀರ ಗಾಯಗೊಳಿಸಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜೂನ್ 19ರಂದು ರಾತ್ರಿ ಸುಮಾರು 10.08 ಗಂಟೆಗೆ ಮಣಿಪಾಲದ ರಾಷ್ಟ್ರೀಯ ಹೆದ್ದಾರಿ 169(ಎ)ಯ ಸಾಯಿಸಾಗರ್ ಹೋಟೆಲ್ ಮುಂಭಾಗದ ಯು-ಟರ್ನ್ ಬಳಿ ಈ ಅಪಘಾತ ಸಂಭವಿಸಿದೆ. ಅಲೆವೂರು ಗ್ರಾಮದ ಕರ್ವಾಲು ನಿವಾಸಿ ಅಭಿಷೇಕ್ ನಾಯಕ್ (21) ಅವರು ತಮ್ಮ ಸ್ಕೂಟಿಯಲ್ಲಿ ಮಣಿಪಾಲದಿಂದ ಕೆಳಪರ್ಕಳದ ಮನೆಗೆ ತೆರಳುತ್ತಿದ್ದ ವೇಳೆ, ಮಣಿಪಾಲ ಎಂಐಟಿ ಕಡೆಯಿಂದ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಅಭಿಷೇಕ್ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಕೂಟಿ ಹಾಗೂ ಕಾರು ಜಖಂಗೊಂಡಿವೆ. ತನಿಖೆಯಲ್ಲಿ ಕಾರು ಚಾಲಕ ಸಮೇಗ್ದ್ ಎಲ್.ಜೆ. (25), ಮುಡಾರು, ಕಾರ್ಕಳ ನಿವಾಸಿಯಾಗಿದ್ದು, ಮದ್ಯಪಾನ ಮಾಡಿ ಕಾರು ಚಲಾಯಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆರೋಪಿಯನ್ನು ಜೂನ್ 22ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



