ಉಡುಪಿ: ದಾವಣಗೆರೆ ಹಿಂದೂ ಜಾಗರಣ ವೇದಿಕೆಯ ಮುಖಂಡ ಸತೀಶ್ ಪೂಜಾರಿಗೆ ಉಡುಪಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಭಾಗಿಯಾಗಬೇಕಿತ್ತು, ಆದರೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಸತೀಶ್ ಪೂಜಾರಿ ಅವರಿಗೆ ಎರಡು ತಿಂಗಳುಗಳ ಕಾಲ ಉಡುಪಿ ಜಿಲ್ಲೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಕೋಮು ಪ್ರಚೋದನೆ ಭಾಷಣ ನಡೆಯದಂತೆ ನಿರ್ಬಂಧಿಸುವ ಉದ್ದೇಶಕ್ಕೆ ಮತ್ತು ದಾವಣಗೆರೆಯ ಸತೀಶ್ ಪೂಜಾರಿ ವಿರುದ್ಧ ಈಗಾಗಲೇ 19 ಕೋಮು ಪ್ರಚೋದಕ ಕ್ರಿಮಿನಲ್ ಪ್ರಕರಣಗಳ ಇರುವ ಹಿನ್ನೆಲೆಯಲ್ಲಿ ಮುಂಜಾಗರೂಕತೆ ಹಿನ್ನೆಲೆಯಲ್ಲಿ ಈ ನಿರ್ಬಂಧ ಹೇರಲಾಗಿದೆ. ಇತ್ತೀಚೆಗಷ್ಟೇ, ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಅವರಿಗೂ ಕೂಡ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ನಿರ್ಬಂಧ ಹೇರಲಾಗಿತ್ತು. ಇದಾದ ಬಳಿಕ ಕೆಲವು ದಿನಗಳ ಹಿಂದೆ ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರಿಗೂ ಕೂಡ ಕುಂದಾಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಜಕೀಯ ವಿಚಾರವಾಗಿ ಭಾಷಣ ಮಾಡದಂತೆ ನೋಟಿಸ್ ನೀಡಲಾಗಿತ್ತು.