ಉಡುಪಿ: ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಲಾರಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಪೊಲೀಸರು ಮರಳು ಸಹಿತ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಡಿಸೆಂಬರ್ 6ರ ಸಂಜೆ 5.30ಕ್ಕೆ, ಅಲೆವೂರು ಗ್ರಾಮದ ಗುಡ್ಡೆ ಅಂಗಡಿ ಚೆಕ್‌ಪೋಸ್ಟ್ ಬಳಿ ಚೆಕ್‌ಪೋಸ್ಟ್ ಕರ್ತವ್ಯದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಅಲೆವೂರಿನಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಲಾರಿ ಚಾಲಕನಿಗೆ ನಿಲ್ಲುವಂತೆ ಸೂಚಿಸಿದಾಗ, ಚಾಲಕನು ಲಾರಿಯನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಅವರನ್ನು ತಕ್ಷಣವೇ ಬಂಧಿಸಿದ್ದಾರೆ.

ಲಾರಿಯನ್ನು ಪರಿಶೀಲಿಸಿದಾಗ ಅದರಲ್ಲಿ ಮರಳು ತುಂಬಿರುವುದು ಕಂಡುಬಂದಿದ್ದು, ವಿಚಾರಣೆ ವೇಳೆ ಲಾರಿ ಚಾಲಕ ಮಣಿಕಂಠ ಅವರು, ಲಾರಿಯ ಮಾಲಿಕ ಸುದೇಶ್ ಶೆಟ್ಟಿ ಅವರ ಹೇಳಿಕೆಯಂತೆ ಕೆಮ್ತೂರು ಪ್ರದೇಶದಲ್ಲಿ ಹಿಂದಿ ಮೂಲದ ಕಾರ್ಮಿಕರಿಂದ ಮರಳು ಲೋಡ್ ಮಾಡಿಕೊಂಡು ಕುಂತಲನಗರಕ್ಕೆ ಸಾಗಿಸುತ್ತಿದ್ದಾಗಿ ತಿಳಿಸಿದ್ದಾರೆ. ಆದರೆ ಲಾರಿಗೆ ಸಂಬಂಧಿಸಿದ ಯಾವುದೇ ಟ್ರಿಪ್ ಶೀಟ್, ಪರವಾನಿಗೆ ಅಥವಾ ಮಾನ್ಯ ದಾಖಲೆ ದೊರಕಲಿಲ್ಲ.

ಪೊಲೀಸರು ಆರೋಪಿಗಳಾದ ಮಣಿಕಂಠ ಮತ್ತು ಮಾಲಿಕ ಸುದೇಶ್ ಶೆಟ್ಟಿ ಅವರು ಸರಕಾರಕ್ಕೆ ಯಾವುದೇ ರಾಜಧನ ಪಾವತಿ ಮಾಡದೇ, ಸರಕಾರಿ ಹೊಳೆಯಿಂದ ಮರಳನ್ನು ಅಕ್ರಮವಾಗಿ ಕಳವು ಮಾಡಿ ಸಾಗಾಟ ಮಾಡುತ್ತಿದ್ದರೆಂಬ ಶಂಕೆಯ ಮೇರೆಗೆ ಲಾರಿ ಹಾಗೂ ಅಂದಾಜು 2 ಯುನಿಟ್ ಮರಳು ವಶಪಡಿಸಿಕೊಂಡಿದ್ದಾರೆ. ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.



