ಉಡುಪಿ: ಮಣಿಪಾಲದ ಖ್ಯಾತ ಕೆಎಂಸಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ತಂತ್ರಜ್ಞಾನ ಸೌಲಭ್ಯವನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಈ ಸೌಲಭ್ಯವನ್ನು ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಉದ್ಘಾಟಿಸಿದರು. ನೂತನ ಸೌಲಭ್ಯ ಉದ್ಘಾಟಿಸಿ ಮಾತನಾಡಿದ ಸೈನಾ ನೆಹ್ವಾಲ್, ರೋಬೋಟಿಕ್ ಸರ್ಜರಿ ಕ್ಷೇತ್ರದಲ್ಲಿ ಭಾರತವೂ ವಿಶ್ವ ಮಟ್ಟದ ಹೆಜ್ಜೆ ಇಡುತ್ತಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ಅಂಕಾಲಜಿ (ಕ್ಯಾನ್ಸರ್ ಶಸ್ತ್ರಚಿಕಿತ್ಸೆ), ಒಬಿಜಿ, ಮೂತ್ರ ಶಾಸ್ತ್ರ ಹಾಗೂ ಮೊಣಕಾಲು-ಕೀಲು ಬದಲಾವಣೆ ಶಸ್ತ್ರಚಿಕಿತ್ಸೆಗಳಲ್ಲಿ ಈ ಅತ್ಯಾಧುನಿಕ ರೋಬೋಟ್ ಉಪಯೋಗಿಸಲಿದ್ದಾರೆ. ಜಿಲ್ಲೆಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ ನಡೆಸುವ ಪ್ರಥಮ ಆಸ್ಪತ್ರೆ ಎಂಬ ಹೆಗ್ಗಳಿಕೆಯನ್ನು ಕೆಎಂಸಿ ಪಡೆದುಕೊಂಡಿದೆ.

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೈನಾ ನೆಹ್ವಾಲ್ ಅವರು, ತಾವು ಈಗ ಬ್ಯಾಡ್ಮಿಂಟನ್ ಆಟದಿಂದ ನಿವೃತ್ತರಾಗಿರುವುದಾಗಿ ತಿಳಿಸಿದರು. ಭಾರವಾದ ಹೃದಯದಿಂದ ಆಟ ತೊರೆದಿದ್ದೇನೆ. ದೈಹಿಕ ಕ್ಷಮತೆ ಈಗ ಹಿಂದೆ ಹಾಗಿಲ್ಲ. ಆಟವಾಡುವ ಉತ್ಸಾಹ ಇದ್ದರೂ ದೇಹ ಸ್ಪಂದಿಸುವುದಿಲ್ಲ. ಕೋಚಿಂಗ್ ತುಂಬಾ ಕಷ್ಟ. ಆಡುವುದಕ್ಕಿಂತ ತರಬೇತಿ ನೀಡುವುದು ಹೆಚ್ಚು ಪರಿಶ್ರಮದ ಕೆಲಸ. ಹತ್ತು-ಹದಿನೈದು ಗಂಟೆ ನಿಂತುಕೊಂಡು ತರಬೇತಿ ನೀಡುವುದು ಸುಲಭವಲ್ಲ. ಹೈದರಾಬಾದ್ ನಲ್ಲಿ ಬ್ಯಾಡ್ಮಿಂಟನ್ ತರಬೇತಿ ನೀಡುವ ಅತ್ಯುತ್ತಮ ಅಕಾಡೆಮಿ ಇದೆ, ನನ್ನ ಪತಿ ಕೂಡ ಪುಲೇಲ ಗೋಪಿಚಂದ್ ಸರ್ ಗೆ ಈಗ ಸಹಾಯ ಮಾಡುತ್ತಿದ್ದಾರೆ. ಆಡುವುದಕ್ಕಿಂತಲೂ ಕೋಚಿಂಗ್ ಗೆ ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತೆ ಎಂದರು.

ಬ್ಯಾಡ್ಮಿಂಟನ್ ಮಾತ್ರವಲ್ಲ, ಎಲ್ಲ ಕ್ರೀಡೆಗಳತ್ತ ಮಕ್ಕಳು ತೊಡಗಿಸಿಕೊಳ್ಳಬೇಕು. ಅವರನ್ನ ಮೋಟಿವೇಟ್ ಮಾಡುವುದೇ ಈಗ ನನ್ನ ಸಂತೋಷ. ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ ನನಗೆ ತುಂಬಾ ಇಷ್ಟ, ರಾಜಕೀಯ ಸುಲಭ ಕ್ಷೇತ್ರವಲ್ಲ. ಎಲ್ಲೆಡೆ ಒತ್ತಡ ಇರುತ್ತದೆ. ಮನೆ, ಸ್ನೇಹಿತರು, ಆಹಾರ ಎಲ್ಲವನ್ನೂ ಬಿಟ್ಟು ಬ್ಯಾಡ್ಮಿಂಟನ್‌ಗೆ ಸಮರ್ಪಿಸಿದ್ದೆ. ಅದು ಒತ್ತಡದ ಜೀವನ, ಆದರೆ ಅದೇ ನನಗೆ ಶಕ್ತಿ ನೀಡಿತು. ಹಿರಿಯ ಆಟಗಾರ ಪ್ರಕಾಶ್ ಪಡುಕೋಣೆ ಅವರ ತವರೂರಿಗೆ ಬಂದು ಸಂತೋಷವಾಯಿತು. ಅವರು ನಮ್ಮೆಲ್ಲರಿಗೂ ಪ್ರೇರಣೆ. ಗೋಪಿ ಸರ್ ಸೇರಿದಂತೆ ಅನೇಕರು ಅವರಿಂದ ಸ್ಪೂರ್ತಿ ಪಡೆದಿದ್ದೇನೆ ಎಂದರು. ಅವರು ಈ ಭಾಗದ ಬ್ಯಾಡ್ಮಿಂಟನ್ ಆಟಗಾರರಾದ ಚೀರಾಗ್ ಶೆಟ್ಟಿ ಮತ್ತು ಸಾತ್ವಿಕ್ ಶೆಟ್ಟಿ ಅವರನ್ನು ಭರವಸೆಯ ಹೊಸ ಪೀಳಿಗೆಯ ಆಟಗಾರರೆಂದು ಸೈನಾ ನೇಹ್ವಾಲ್ ಪ್ರಶಂಸಿಸಿದರು.
