ಉಡುಪಿ : ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಂಗ ಸಂಸ್ಥೆಗಳಾದ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ, ಉಳ್ಳಾಲದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಮೇಳ ನಡೆಯಲಿದೆ.

ಈ ಬಾರಿ ವಿಶೇಷವಾಗಿ ಕೇಂದ್ರದ ವತಿಯಿಂದ ಕೃಷಿಕರಿಗೆ ಸಹ್ಯಾದ್ರಿ ಬ್ರಹ್ಮ, ಸಹ್ಯಾದ್ರಿ ಪಂಚಮುಖಿ, ಸಹ್ಯಾದ್ರಿ ಸಪ್ತಮಿ, ಕಜೆ 25-9 ಹಾಗೂ ಕೇಂದ್ರದಲ್ಲಿ ಪ್ರಸ್ತುತ ಪ್ರಯೋಗ ನಡೆಸಿರುವ ಇತರ ಭತ್ತದ ತಳಿಗಳನ್ನು ಪರಿಚಯ ನಡೆಯಲಿದೆ. ಇದರ ಜೊತೆ ರೈತರ ಕೃಷಿ ಚಟುವಟಿಕೆಗೆ ಪೂರಕವಾದ ಕೃಷಿ ಯಂತ್ರೋಪಕರಣಗಳ ಪರಿಚಯ ಕೃಷಿಮೇಳದಲ್ಲಿ ನಡೆಯಲಿದೆ.

ಕೃಷಿಯಲ್ಲಿ ಡ್ರೋನ್ ಬಳಕೆಯ ಪ್ರಾತ್ಯಕ್ಷಿಕೆ, ಸಿಒ-4, 5 ಮತ್ತು ಸಿಒಎಫ್‌ಎಸ್ – 29, 31 ಹಾಗೂ ಸೂಪರ್ ನೇಪಿಯರ್ ಮೇವಿನ ಬೆಳೆಗಳ ಪ್ರಾತ್ಯಕ್ಷಿಕೆ, ತೆಂಗಿನಲ್ಲಿ ಬಹುಬೆಳೆ ಯೋಜನೆ ಮತ್ತು ಪೋಷಕಾಂಶಗಳ ನಿರ್ವಹಣೆ, ತೋಟಗಾರಿಕೆ ಬೆಳೆಗಳಲ್ಲಿ ಕಸಿಕಟ್ಟುವಿಕೆ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರಗೊಬ್ಬರ, ಅಜೋಲಾ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆ, ಹೈನುಗಾರಿಕೆ, ಮೀನುಗಾರಿಕೆ, ಆಡು, ಕೋಳಿ ಮತ್ತು ಬಾತುಕೋಳಿ ಸಾಕಾಣಿಕೆಗಳ ಪ್ರಾತ್ಯಕ್ಷಿಕೆ, ಜೈವಿಕ ಅನಿಲ ಉತ್ಪಾದನಾ ಘಟಕಗಳು, ಆಲಂಕಾರಿಕ ಮತ್ತು ಹೂವಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಚಿಟ್ಟೆ ಪಾರ್ಕ್, ಕೃಷಿ ಪ್ರವಾಸೋದ್ಯಮ, ಜೇನು ಕೃಷಿ ಮತ್ತು ಆಕರ್ಷಕ ಕೃಷಿ ವಸ್ತು ಪ್ರದರ್ಶನ ನಡೆಯಲಿದೆ. ಜೊತೆಗೆ ಸುಮಾರು 300 ಎಕರೆ ಪ್ರದೇಶದಲ್ಲಿ ನಡೆಯುವ ಕೃಷಿ ಚಟುವಟಿಕೆಗಳ ಬಗ್ಗೆ ಕೃಷಿ ಪ್ರವಾಸ, ಚಿಟ್ಟೆ ಉದ್ಯಾನ, ಮಧುವನ, ಜೇನು ಪೆಟ್ಟಿಗೆ ಪ್ರದರ್ಶನ ಮತ್ತು ಮಾರಾಟ, ಸಮಗ್ರ ಕೃಷಿ ಘಟಕಗಳ ಕೇತ್ರ ಭೇಟಿ ಈ ಬಾರಿಯ ಕೃಷಿ ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿದೆ. 200 ಕ್ಕೂ ಅಧಿಕ ಮಳಿಗೆಗಳಲ್ಲಿ ಕೃಷಿ ಪರಿಕರಗಳ ವಸ್ತು ಪ್ರದರ್ಶನ ನಡೆಯಲಿದೆ.